ಹುಚ್ಚೂರಾಯಸ್ವಾಮಿ ಬ್ರಹ್ಮರಥೋತ್ಸವ
ಶಿಕಾರಿಪುರ: ಇತಿಹಾಸ ಪ್ರಸಿದ್ಧ ಶಿಕಾರಿಪುರದ ಶ್ರೀ ಹುಚ್ಚೂರಾಯಸ್ವಾಮಿಯ ಬ್ರಹ್ಮರಥೋತ್ಸವ ಗುರುವಾರ ಬೆಳಗ್ಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆ ಹಾಗೂ ಅದ್ಧೂರಿಯಾಗಿ ನೆರವೇರಿತು.
ಬೆಳಗ್ಗೆ 8.40ರಲ್ಲಿನ ಶುಭ ಮಹೂರ್ತದಲ್ಲಿ ಶ್ರೀ ಹುಚ್ಚೂರಾಯಸ್ವಾಮಿಯ ಬ್ರಹ್ಮರಥೋತ್ಸವವು ಶ್ರೀ ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಮಹಾಬಲಿ ಹಾಗೂ ವೇದ ಮಂತ್ರ ಘೋಷಣೆ ಸಹಿತ ಬ್ರಹ್ಮ ರಥಾರೋಹಣ ಫಲ ಸಮರ್ಪಣೆ ಮಹಾ ಮಂಗಳಾರತಿ, ವಾದ್ಯಗಳೊಂದಿಗೆ ದೇವಸ್ಥಾನದಿಂದ ಹೊರಟು ಮಾರಿಗುಡಿ ಸಮೀಪದಲ್ಲಿ ನಿಲ್ಲಿಸಲಾಯಿತು.
ಈ ಬಾರಿಯ ರಥೋತ್ಸವಕ್ಕೆ ಚುನಾವಣಾ ನೀತಿ ಸಂಹಿತೆಯು ಅಡ್ಡಗಾಲಾಗಿದ್ದು, ಈ ದಿಸೆಯಲ್ಲಿ ನಾಡಿನ ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತವೃಂದ ಅನ್ನ ಸಂತರ್ಪಣೆಯ ಪ್ರಸಾದದಿಂದ ವಂಚಿತರಾಗಿ ಹುಚ್ಚೂರಾಯನ ದರ್ಶನ ಪಡೆದು ವಾಪಸ್ ಮರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಥೋತ್ಸವದ ಧಾರ್ಮಿಕ ಕಾರ್ಯದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ, ಮಾಜಿ ಶಾಸಕ ಶಾಂತವೀರಪ್ಪಗೌಡ, ಪುರಸಭಾ ಸದಸ್ಯ ನಾಗರಾಜಗೌಡ ಮುಖಂಡ ಕೊಪ್ಪಲು ಮಂಜುನಾಥ್, ತಹಸೀಲ್ದಾರ್ ಗಣಾಚಾರಿ, ರಾಜಸ್ವ ನಿರೀಕ್ಷಕ ಮಂಜುನಾಥ್ ಮತ್ತು ತಾಲೂಕು ಕಚೇರಿಯ ಸಿಬ್ಬಂದಿ ಭಾಗವಹಿಸಿದ್ದರು