ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಭ್ಯರ್ಥಿಗಳ ಕಾರುಬಾರು ಬಲು ಜೋರು

Rashmi Kasaragodu
Updated On : 27 Apr 2013, 10:35 am

ಮೋಹನ್ ಕುಮಾರ್. ಎನ್.
ಕ.ಪ್ರ.ವಾರ್ತೆ ಶಿವಮೊಗ್ಗ, ಏ.26
ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮನೆಯ ಹೊಸ್ತಿಲು ದಾಟುತ್ತಿದ್ದಂತೆ ಐಷಾರಾಮಿ ಕಾರು ಏರುತ್ತಾರೆ. ಆದರೆ, ಅದು ಅವರದ್ದಲ್ಲ. ವಾಸ್ತವವಾಗಿ ಅವರ ಬಳಿ ಸ್ವಂತ ವಾಹನವೇ ಇಲ್ಲ. ಇವರಷ್ಟೇ ಅಲ್ಲ, ಸಾಗರದ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಅವರ ಬಳಿಯೂ ಸಹ ಕಾರು ಇಲ್ಲ.
ಇತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಸೊರಬ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಚ್. ಹಾಲಪ್ಪ ಟೋಯಟಾ ಫಾರ್ಚುನರ್ ಕಾರು ಹೊಂದಿದ್ದಾರೆ. ಇದರ ಮೌಲ್ಯ ಸರಿಸುಮಾರು 25 ಲಕ್ಷ.
ಭದ್ರಾವತಿ ಕ್ಷೇತ್ರದ ಶಾಸಕ ಹಾಗೂ ಕೆಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ ಅವರ ಹೆಸರಿನಲ್ಲಿ ಕಾರುಗಳಿಲ್ಲ, ಆದರೆ ಎರಡು ಬೈಕ್‌ಗಳಿವೆ.
ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್, ಶಿವಮೊಗ್ಗ ನಗರದ ಜೆಡಿಎಸ್ ಅಭ್ಯರ್ಥಿ ಎಂ. ಶ್ರೀಕಾಂತ್, ಜೆಡಿಯುನ ಮಂಜುನಾಥ ತ್ಯಾಜವಳ್ಳಿ, ಭದ್ರಾವತಿ ಬಿಎಸ್ಪಿ ಅಭ್ಯರ್ಥಿ ಸುರೇಂಜ ಸಿಪಿಐ- ಎಂಎಲ್ ಅಭ್ಯರ್ಥಿ ಮೂರ್ತಿ, ಶಿಕಾರಿಪುರ ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪಗೌಡ, ಬಿಎಸ್ಪಿ ಅಭ್ಯರ್ಥಿ ಶೇಖರಪ್ಪ, ಸಾಗರ ಬಿಜೆಪಿ ಅಭ್ಯರ್ಥಿ ಶರಾವತಿ ಸಿ. ರಾವ್ ಅವರ ಬಳಿಯೂ ಸ್ವಂತ ವಾಹನವಿಲ್ಲ. ಕೆಲವರ ಬಳಿ ಪತ್ನಿ ಹೆಸರಲ್ಲಿ ಒಂದು ಕಾರು ಇದೆ ಅಷ್ಟೇ.
ಗ್ರಾಮಾಂತರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿ. ಭಗವಾನ್ 15 ಲಕ್ಷದ ಒಂದು ಹಿಟಾಚಿ ಕ್ರೇನ್ ಇದೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ.
ಅಭ್ಯರ್ಥಿಗಳು ಹೊಂದಿರುವ ವಾಹನಗಳ ವಿವರ ಹಲವು ಕುತೂಹಲಕಾರಿ ಅಂಶಗಳಿಂದಾಗಿ ಗಮನ ಸೆಳೆಯುತ್ತಿದೆ.
ಮದನ್ ದರ್ಬಾರ್: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮದನ್ ಐದಾರು ವಾಹನಗಳ ಒಡೆಯ. ಅವರ ಬಳಿ 27 ಲಕ್ಷ ಮೌಲ್ಯದ ಐಷಾರಾಮಿ ಕಾರು ಸೇರಿದಂತೆ ಅತಿ ಹೆಚ್ಚು ವಾಹನ ಹೊಂದಿದ್ದಾರೆ.
ಮದನ್ ಅವರ ಬಳಿ ಒಂದು ವ್ಯಾಲ್ವೋ ಎಕ್ಸ್‌ಸಿ (27 ಲಕ್ಷ), ಸ್ಕೋಡಾ ಸುಪರ್ಬ್ (16 ಲಕ್ಷ), ಮಾರುತಿ ಎರಿಟ್ಜ್ (8 ಲಕ್ಷ), ಮಾರುತಿ ಸ್ವಿಫ್ಟ್ (5 ಲಕ್ಷ), ನಿಸಾನ್ ಎಕ್ಸ್ ಟ್ರಯಲ್ (4 ಲಕ್ಷ), ಒಂದು ಟಾಟಾ 407 (20 ಸಾವಿರ) ಇದೆ. ಅವರ ಪತ್ನಿ ಹೆಸರಲ್ಲೂ ನಾಲ್ಕು ಕಾರುಗಳಿವೆ.
ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಸ್. ರುದ್ರೇಗೌಡ ಅವರ ಬಳಿ, 7.5 ಲಕ್ಷ ಹಾಗೂ 10.5 ಲಕ್ಷ ಮೌಲ್ಯದ ಎರಡು ಕಾರುಗಳಿವೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್ ಬಳಿ 10 ಲಕ್ಷ ಮೌಲ್ಯದ ಮಾರುತಿ ಎರಿಟ್ಜ್ ಕಾರಿದೆ. ಗ್ರಾಮಾಂತರ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಜಿ. ಬಸವಣ್ಯಪ್ಪ ಅವರು, 9.5 ಲಕ್ಷ ಮೌಲ್ಯದ ಇನ್ನೋವಾ ಕಾರು ಹೊಂದಿದ್ದರೆ, ಬಿಜೆಪಿ ಅಭ್ಯರ್ಥಿ ಕೆ.ಜಿ. ಕುಮಾರಸ್ವಾಮಿ ಬಳಿ 5 ಲಕ್ಷ ಮೌಲ್ಯದ ಕಾರು, ಜೆಡಿಯು ಅಭ್ಯರ್ಥಿ ಶಿವಕುಮಾರ್ ಬಳಿ 9.20 ಲಕ್ಷ ಮೌಲ್ಯದ ಕಾರು ಇದೆ.
ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್ 1.19 ಲಕ್ಷ ಟಾಟಾ ಇಂಡಿಕಾ ಕಾರು, ಸಾಗರ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬಿ.ಆರ್. ಜಯಂತ್ ಬಳಿ 9 ಲಕ್ಷ ಮೌಲ್ಯದ ಫಿಯಟ್ ಕಾರು ಸೇರಿದಂತೆ ಒಟ್ಟು ನಾಲ್ಕು ಕಾರು, ಒಂದು ಆಕ್ಟಿವ್ ಹೋಂಡಾ ಬೈಕ್ ಇದೆ. ಜೆಡಿಎಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು 8 ಲಕ್ಷ ಕ್ವಾಲಿಸ್, ತೀರ್ಥಹಳ್ಳಿ ಕೆಜೆಪಿ ಅಭ್ಯರ್ಥಿ ಆರ್.ಎಂ. ಮಂಜುನಾಥಗೌಡ ಅವರ ಹೆಸರಲ್ಲಿ 4 ಲಕ್ಷ ಮೌಲ್ಯದ ಹೋಂಡಾ ಸಿಆರ್‌ವಿ ಕಾರು, ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ 3 ಲಕ್ಷದ ಸ್ಕಾರ್ಪಿಯೋ ಹೊಂದಿದ್ದಾರೆ.
ಇನ್ನೂ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಇಬ್ರಾಹಿಂ ಬಳಿ 7.5 ಮೌಲ್ಯದ ಟೊಯೊಟಾ ಕ್ವಾಲಿಸ್, ಬಿಜೆಪಿ ಅಭ್ಯರ್ಥಿ ಶಿವಾಜಿರಾವ್ ಸಿಂಧ್ಯ ಬಳಿ ಫೋರ್ಡ್ ಐಕಾನ್ (5 ಲಕ್ಷ) ಕಾರಿದೆ.
ಸೊರಬ ಮತ್ತು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಸಹ ಕಾರು ಐಷಾರಾಮಿ ಕಾರುಗಳನ್ನು ಹೊಂದುವಲ್ಲಿ ಹಿಂದೆ ಬಿದ್ದಿಲ್ಲ.
ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ಎಸ್.ಎಚ್. ಮಂಜುನಾಥ ಅವರ ಪತ್ನಿ ಹೆಸರಿಲ್ಲಿ 2.50 ಲಕ್ಷ ಸ್ಯಾಟ್ರೊ, ಸೊರಬ ಕ್ಷೇತ್ರದ ಸಾರೇಕೊಪ್ಪ ಬಂಗಾರಪ್ಪ ಅವರ ಮಕ್ಕಳಾದ ಕುಮಾರ ಬಂಗಾರಪ್ಪ 24.53 ಲಕ್ಷದ ಚವರ್‌ಲೆಟ್ ಕ್ಯಾಪ್ಟಿವಾ, ತಮ್ಮ ಮಧು ಬಂಗಾರಪ್ಪ 42 ಲಕ್ಷದ ಒಂದು ಇನೋವಾ ಮತ್ತು ಫಾರ್ಚುನರ್ ಕಾರು ಹೊಂದಿದ್ದಾರೆ.
ಅಂಬಾಸಿಡರ್ ಮೋಹ: ರಾಜಕಾರಣಿಗಳು ಐಷಾರಾಮಿ ಕಾರುಗಳತ್ತ ಮುಖ ಮಾಡಿದ್ದರೆ, ಭದ್ರಾವಾತಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಜೆ. ಅಪ್ಪಾಜಿಗೌಡ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಕರಿಯಣ್ಣ ಅವರು ಇನ್ನೂ ಅಂಬಾಸಿಡರ್ ಕಾರನ್ನೇ ಬಳಸುತ್ತಿದ್ದಾರೆ.
ಅಪ್ಪಾಜಿ ಗೌಡ ಅವರ ಬಳಿ ಒಂದು ಇನ್ನೋವಾ ಹಾಗೂ ಟಾಟಾ ಸಫಾರಿ ಕಾರುಗಳಿದ್ದರೂ, ಇವು ಅವರ ಪತ್ನಿ ಮತ್ತು ಪುತ್ರನ ಹೆಸರಿನಲ್ಲಿದೆ. ಆದರೆ, ಅಂಬಾಸಿಡರ್ ಕಾರು ಅವರ ಹೆಸರಿನಲ್ಲಿಯೇ ಇದೆ. ಕರಿಯಣ್ಣರ ಅಂಬಾಸಿಡರ್ ಕಾರು ಪತ್ನಿ ವಿಜಯಕುಮಾರಿ ಅವರ ಹೆಸರಿನಲ್ಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement