ಇಂದು ಸಾಗರಕ್ಕೆ ಕುಮಾರಸ್ವಾಮಿ (ಸುದ್ದಿ ಸಂಕ್ಷೇಪ)
ಸಾಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಏ.27ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಸಾಗರದ ಗಾಂಧಿಮೈದಾನದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅದೇ ಮಧ್ಯಾಹ್ನ 2ಕ್ಕೆ ಹೊಸನಗರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ನಿರೀಕ್ಷೆ ಉಲ್ಟಾ: ಜನರು ಕುಮಾರಸ್ವಾಮಿಯವರ 20 ತಿಂಗಳ ಆಡಳಿತವನ್ನು ಬಹುವಾಗಿ ಮೆಚ್ಚಿಕೊಂಡಿದ್ದು ಇದರಿಂದ ರಾಜ್ಯಾದ್ಯಂತ ಜೆಡಿಎಸ್ ಪರವಾರ ಅಲೆ ಪ್ರಬಲವಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪನವರ ಪರವಾಗಿ ಸಾಹಿತಿಗಳು, ಚಿಂತಕರು, ವಿಮರ್ಶಕರು ಮತಯಾಚಿಸಿ ಕರಪತ್ರ ಹೊರಡಿಸಿರುವ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ, ಸಾಹಿತಿಗಳ ಬಗ್ಗೆ ತಮಗೆ ಅಪಾರವಾದ ಗೌರವವಿದೆ. ಅವರುಗಳು ಕಾಗೋಡು ಪರವಾಗಿ ಮತಯಾಚಿಸುವ ಬದಲು ಪಕ್ಷೇತರ ಅಭ್ಯರ್ಥಿ ಟಿ.ಆರ್. ಕೃಷ್ಣಪ್ಪ ಪರ ನಿಂತಿದ್ದರೆ ಸಂತೋಷವಾಗುತ್ತಿತ್ತು. ಸಾಹಿತಿಗಳು ಎಂದರೆ ಪಕ್ಷ, ಜಾತಿ, ಧರ್ಮಕ್ಕೆ ಅತೀತರಾದವರು. ಅಂಥವರು ಒಂದು ರಾಜಕೀಯ ಪಕ್ಷದ ಪರವಾಗಿ ನಿಲ್ಲುವ ಬದಲು ಪಕ್ಷೇತರ ಅಭ್ಯರ್ಥಿ ಪರವಾಗಿ ನಿಲ್ಲಬೇಕಿತ್ತು ಎಂದು ತಿರುಗೇಟು ನೀಡಿದರಲ್ಲದೆ ತಮ್ಮನ್ನು ಪಕ್ಷಾಂತರಿ ಎನ್ನುವವರು ಕಾಗೋಡು ಕೂಡ ಹಿಂದೆ ಪಕ್ಷಾಂತರ ಮಾಡಿದವರೇ ಎನ್ನುವುದನ್ನು ಮರೆತಿದ್ದಾರೆ ಎಂದು ಹೇಳಿದರು. ಕೆ. ಅರುಣಪ್ರಸಾದ್, ಬಸವರಾಜ ಬೈದೂರು, ತಿಮ್ಮಪ್ಪ, ವೆಂಕಟೇಶ್, ಪ್ರೇಮಸಾಗರ್, ಕಲಸೆ ಚಂದ್ರಪ್ಪ, ದೀನದಯಾಳು, ಉಮೇಶನಾಯಕ್, ಕನ್ನಪ್ಪ, ಅಮೃತರಾಸ್ ಹಾಜರಿದ್ದರು.
ತೀರ್ಥಹಳ್ಳಿಯಲ್ಲಿ ಪ್ರಚಾರ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರು ತೀರ್ಥಹಳ್ಳಿಗೆ ಆಗಮಿಸಿ ಸಭೆಯಲ್ಲಿ ಭಾಗವಹಿಸುವರು. ಅಭ್ಯರ್ಥಿ ಆರ್. ಮದನ್ ಪರ ಚುನಾವಣಾ ಭಾಷಣ ಮಾಡಲಿದ್ದಾರೆ. ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯ ದೊಡ್ಡ ಮನೆಕೇರಿಯಲ್ಲಿ ಪ್ರಚಾರ ಸಭೆ ಏರ್ಪಡಿಸಲಾಗಿದ್ದು, 12.30ಕ್ಕೆ ಸಭೆ ನಡೆಯಲಿದೆ.
ಶ್ರೀಕಾಂತ್ ಪ್ರಚಾರ
ಶಿವಮೊಗ್ಗ: ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ. ಶ್ರೀಕಾಂತ್ ಅವರಿಗೆ ಮತ ನೀಡುವಂತೆ ವಕೀಲರ ತಂಡ ಗುರುವಾರ ಕೋರ್ಟ್ ಆವರಣದಲ್ಲಿ ಮನವಿ ಮಾಡಿದರು. ಮೇ5 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಕುಲಗೆಟ್ಟ ರಾಜಕೀಯ ಪರಿಸ್ಥಿತಿಯನ್ನು ನೋಡಿಕೊಂಡು ಮತದಾರರ ಸುಮ್ಮನೆ ಕೂರಬಾರದು. ಶಿವಮೊಗ್ಗ ಜಿಲ್ಲೆಯಿಂದಲೇ ಬದಲಾವಣೆ ಪರ್ವ ಆರಂಭವಾಗಬೇಕಾಗಿದೆ ಅದಕ್ಕಾಗಿ ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡಿದರು. ಕಾಂಗ್ರೆಸ್, ಬಿಜೆಪಿ ಮತ್ತೆ ಅಧಿಕಾರ ಪಡೆಯಲು ಹವಣಿಸುತ್ತಿದೆ. ಮತಕ್ಕಾಗಿ ಜನರಿಗೆ ಸುಳ್ಳು ಭರವಸೆ ನೀಡುತ್ತಾ ದಾರಿ ತಪ್ಪಿಸುತ್ತಿದೆ ಎಂದು ಅವರು ದೂರಿದರು.