ಇಂದು ಸಾಗರದಲ್ಲಿ ಯಾದವ್ ಪ್ರಚಾರ
ಶಿವಮೊಗ್ಗ: ಪ್ರಾಮಾಣಿಕ ರಾಜಕಾರಣಿಯಾಗಿದ್ದ ಗೋಪಾಲಗೌಡರೇ ನಮಗೆ ಸ್ಫೂರ್ತಿ. ನಾವು ಹಣ, ಹೆಂಡ ಹಂಚದೆ ಚುನಾವಣೆ ಎದುರಿಸುತ್ತೇವೆ ಎಂದು ಜೆಡಿಯು ಹೇಳಿಕೊಂಡಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ. ಧರ್ಮಪ್ಪ, ನಮ್ಮ ಪಕ್ಷದಿಂದ ಜಿಲ್ಲೆಯಲ್ಲಿ ಸ್ಪರ್ಧಿಸಿರುವ ಯಾವುದೇ ಅಭ್ಯರ್ಥಿ ಶ್ರೀಮಂತರಿಲ್ಲ. ಎಲ್ಲರೂ ಬಡವರೇ. ನಾವು ಪ್ರಾಮಾಣಿಕತೆಯಿಂದ ಚುನಾವಣೆ ಎದುರಿಸುತ್ತೇವೆ, ಜನ ನಮ್ಮನ್ನು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಭ್ರಷ್ಟ ಆಡಳಿತ ನೀಡುತ್ತಾ ಬಂದಿದೆ. ಬಿಜೆಪಿ ಕೋಮುವಾದಿ ಪಕ್ಷವಾಗಿದೆ. ಕೆಜೆಪಿ, ಬಿಎಸ್ಆರ್ ಕುಟುಂಬ ರಾಜಕಾರಣ ಮಾಡುತ್ತಿವೆ. ಒಟ್ಟಾರೆ ಸ್ವಜನ ಪಕ್ಷಪಾತದಿಂದ ಜನತೆ ಬೇಸತ್ತು ಹೋಗಿದ್ದಾರೆ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷೆ ಮಂಜುಳಾದೇವಿ ಮಾತನಾಡಿ, ಶನಿವಾರ ಸಂಜೆ ಪಕ್ಷದ ರಾಷ್ಟ್ರಾಧ್ಯಕ್ಷ ಶರದ್ ಯಾದವ್ ಸಾಗರಕ್ಕೆ ಬರಲಿದ್ದು, ಸಂಜೆ 6 ಗಂಟೆಗೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಮುಖಂಡರು ಉಪಸ್ಥಿತರಿರುವರು ಎಂದರು.