ಈಶ್ವರಪ್ಪರನ್ನು ಗೆಲ್ಸಿ, ಬಿಎಸ್‌ವೈರನ್ನು ಸೋಲ್ಸಿ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಏ.26
ಈಶ್ವರಪ್ಪರನ್ನು ಗೆಲ್ಲಿಸಿ, ಯಡಿಯೂರಪ್ಪರನ್ನು ಸೋಲಿಸಿ ಎಂದು ಬಿಜೆಪಿ ಸ್ಟಾರ್ ಪ್ರಚಾರಕಿ, ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು ಹೇಳಿದ ರು.
ಈಶ್ವರಪ್ಪರನ್ನು ಸೋಲಿಸಬೇಕೆಂಬುದು ಯಡಿಯೂರಪ್ಪರ ಏಕೈಕ ಗುರಿಯಾಗಿದೆ. ಚುನಾವಣೆ ರಾಜಕೀಯದಲ್ಲಿ ಲೆಕ್ಕವನ್ನು ಬಾಕಿ ಉಳಿಸಿಕೊಳ್ಳಬಾರದು. ಅವರಿಗೆ ಬಡ್ಡಿ ಸಮೇತ ವಾಪಸ್ ಕೊಡಬೇಕು. ಹಾಗಾಗಿ ನಾವು ಎರಡು ಕಾರ್ಯಕ್ರಮ ಹಾಕಿಕೊಳ್ಳೋಣ. ಈಶ್ವರಪ್ಪರನ್ನು ಗೆಲ್ಲಿಸುವ ಹಾಗೂ ಯಡಿಯೂರಪ್ಪರನ್ನು ಸೋಲಿಸುವ ಜವಾಬ್ದಾರಿ ಹೊರೋಣ ಎಂದರು.
ಅಧಿಕಾರದಿಂದ ಸಾಧ್ಯವಾಯ್ತು: ಶುಕ್ರವಾರ ಸಂಜೆ ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಯನ್ನು ನಾನು ಮಾಡಿದ್ದೆಂದು ಯಡಿಯೂರಪ್ಪ ಹೇಳುತ್ತಾರೆ. ಬಿಜೆಪಿ ಪಕ್ಷವು ಅವರಿಗೆ ಅಧಿಕಾರ ಕೊಟ್ಟಿದ್ದರಿಂದಲೇ ಅವರಿಗೆ ಅಭಿವೃದ್ಧಿ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.
ಬಿಎಸ್‌ವೈ ಜಿಲ್ಲೆಯ ಅಭಿವೃದ್ಧಿಯನ್ನು ಮಾತ್ರ ಮಾಡಿದ್ದಾರೆ. ಆದರೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ಅವರು ಇಡೀ ರಾಜ್ಯದ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ಬಣ್ಣಿಸಿದರು.
ಬಿಜೆಪಿಯು ಯಡಿಯೂರಪ್ಪರಿಗೆ ಅಧಿಕಾರ ಕೊಟ್ಟಿತು. ಆದರೆ ಅವರು ತಮ್ಮನ್ನು ಬೆಳೆಸಿದ, ತಾಯಿಯ ಸ್ಥಾನದಲ್ಲಿದ್ದ ಪಕ್ಷದ ಕುತ್ತಿಗೆಯನ್ನು ಕತ್ತರಿಸುವ ಕೆಲಸ ಮಾಡಿದ್ದಾರೆ ಎಂದರು.
ಮಿಶ್ರ ಭಾವ: ನಾನು ಪ್ರತಿ ಬಾರಿ ಕರ್ನಾಟಕಕ್ಕೆ ಬರುವಾಗ ಸಂತೋಷದಿಂದ ಬರುತ್ತಿದೆ. ಈ ಬಾರಿ ಸಂತೋಷದ ಜತೆಗೆ ವಿಷಾದವೂ ಇದೆ ಎಂದ ಸುಷ್ಮಾ ಸ್ವರಾಜ್, ದಕ್ಷಿಣ ಭಾರತದಲ್ಲಿಯೇ ಮೊದಲ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಆಡಳಿತ ಮಾಡಿದ ಬಗ್ಗೆ ಸಂತೋಷವಿದೆ. ಒಬ್ಬ ವ್ಯಕ್ತಿ ಪದೇ ಪದೇ ಜಗಳ ಮಾಡುತ್ತಿದ್ದು, ಕೊನೆಗೆ ಜಗಳ ಮಾಡುತ್ತಲೇ ಹೊರಟುಹೋದ ಬಗ್ಗೆ ದುಃಖವಿದೆ ಎಂದರು.
ಶಿವಮೊಗ್ಗ ರಾಜಕೀಯವಾಗಿ ಪ್ರಮುಖ ಸ್ಥಾನ ಪಡೆದಿದೆ. ಇಲ್ಲಿಯ ಜನರು ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬರಬೇಕೆಂದು ನಿರ್ಧರಿಸುವಲ್ಲಿ ಸಮರ್ಥರಾಗಿದ್ದಾರೆ. ಈ ಬಾರಿ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕೋರಿದರು.
ಕೇಂದ್ರಕ್ಕೆ ತರಾಟೆ: ಸುಷ್ಮಾ ಸ್ವರಾಜ್ ಅವರು ತಮ್ಮ ಭಾಷಣದ ಬಹುಪಾಲು ಸಮಯವನ್ನು ಕೇಂದ್ರ ಸರ್ಕಾರ ಟೀಕಿಸುವುದಕ್ಕೆ ವಿನಿಯೋಗಿಸಿದರು. ಕೇಂದ್ರ ಸರ್ಕಾರವು ಆಕಾಶ, ಭೂಮಿ, ಪಾತಾಳದ ವರೆಗೆ ಭ್ರಷ್ಟಾಚಾರ ಮಾಡಿದೆ ಎಂದು ಕಾಮನ್‌ವೆಲ್ತ್ ಹಗರಣ, 2ಜಿ ಹಗರಣ ಹಾಗೂ ಕಲ್ಲಿದ್ದಲು ಹಗರಣವನ್ನು ಪ್ರಸ್ತಾಪಿಸಿದರು. ಪ್ರಧಾನಮಂತ್ರಿಯ ಮನೆ ಬಾಗಿಲ ವರೆಗೆ ಹಗರಣ ನಡೆದಿದೆ ಎಂದು ಟೀಕಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಜನಜೀವನ ಕಷ್ಟಕರವಾಗಿದೆ ಎಂದರು.
ಕನ್ನಡದಲ್ಲಿ ಆರಂಭ: ಸುಷ್ಮಾ ಸ್ವರಾಜ್ ಅವರು ಕನ್ನಡದಲ್ಲಿ ಭಾಷಣ ಆರಂಭಿಸಿ ನಂತರ ಹಿಂದಿಯಲ್ಲಿ ಮುಂದುವರಿಸಿದರು. ಇವರ ಭಾಷಣವನ್ನು ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್ ಭಾಷಾಂತರಿಸಿದರು.
ಅಭ್ಯರ್ಥಿಗಳಾದ ಈಶ್ವರಪ್ಪ, ಕೆ.ಜಿ. ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ಎಂ.ಬಿ. ಭಾನುಪ್ರಕಾಶ್, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ರೀನಾ ಪ್ರಕಾಶ್ ಸೇರಿದಂತೆ ಮುಖಂಡರು ಇದ್ದರು.