ಜೆಡಿಎಸ್ಗೆ ಮಲೆನಾಡಲ್ಲಿ ಬೆಳೆ ತೆಗೆಯುವ ತಹತಹ
ಹೊನ್ನಾಳಿ ಚಂದ್ರು/ ಶ್ರೀಕಾಂತ್
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಏ.26
ಒಂದು ಕಾಲದಲ್ಲಿ ಮಲೆನಾಡಿನಲ್ಲಿ ಸುವರ್ಣ ಯುಗ ಕಂಡಿದ್ದ ಜನತಾ ಪರಿವಾರಕ್ಕೆ ಮತ್ತೆ ಅದೇ ದಿನಗಳನ್ನು ನೋಡುವ ಬಯಕೆ. ಈ ಸುವರ್ಣ ಯುಗವನ್ನು ಒಂದು ಬಾರಿ ಬಂಗಾರಪ್ಪ ಅಲೆ ಅಂತ್ಯಗೊಳಿಸಿದರೆ, ಇನ್ನೊಮ್ಮೆ ಯಡಿಯೂರಪ್ಪ ಪ್ರವಾಹ ಕೊಚ್ಚಿಹಾಕಿತ್ತು.
ಈಗ ಬಂಗಾರಪ್ಪ ಅವರ ಹೆಸರಿನ ಬಲವೇನೋ ಜೆಡಿಎಸ್ ಜತೆಗಿದೆ. ಆದರೆ ಬಂಗಾರಪ್ಪ ಇಲ್ಲ. ಒಂದೆಡೆ ಬಿಜೆಪಿ ವಿರೋಧಿ ಅಲೆ, ಕಾಂಗ್ರೆಸ್ ಪರ ಒಲವಿನ ಹರಿವಿನ ನಡುವೆಯೇ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಪ್ರಭುತ್ವ ಸಾಧಿಸುವ ನಿಟ್ಟಿನಲ್ಲಿ ಇನ್ನಿಲ್ಲದ ಪ್ರಯತ್ನ ಆರಂಭಿಸಿದೆ.
ಕನಿಷ್ಠ 3 ಸ್ಥಾನ ಗೆಲವು: ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಮೂರು ಸ್ಥಾನಗಳನ್ನಾದರೂ ಗೆಲ್ಲಲೇಬೇಕೆಂದು ಹೊರಟಿರುವ ಪಕ್ಷದ ನಾಯಕರು ಸತತ ಪ್ರಯತ್ನ ನಡೆಸಿದ್ದಾರೆ. ಇದರ ಪರಿಣಾಮ ಎದುರಾಳಿ ಪಕ್ಷಗಳ ಮೇಲೂ ಆಗಿದೆ ಎಂದರೆ ತಪ್ಪಿಲ್ಲ.
ಪ್ರಮುಖವಾಗಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ, ಭದ್ರಾವತಿ ಹಾಗೂ ಸೊರಬ ಕ್ಷೇತ್ರದಲ್ಲಿ ಗೆಲ್ಲಬಹುದಾದ ಅಂಶಗಳು ಇವೆ ಎಂಬುದು ಆ ಪಕ್ಷದ ಮುಖಂಡರ ವಾದ. ಜತೆಗೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿಯೂ ಸಹ ಜೆಡಿಎಸ್ ಎದುರಾಳಿಗಳ ನಿದ್ದೆಗೆಡಿಸುತ್ತಿದೆ.
ಪಕ್ಷಕ್ಕೆ ಅಸ್ತಿತ್ವ ಇಲ್ಲ: ಕಾಂಗ್ರೆಸ್ ಹಾಗೂ ಬಿಜೆಪಿ ಮಲೆನಾಡಿನಲ್ಲಿ ಬೇರು ಬಿಟ್ಟಂತೆ ಜೆಡಿಎಸ್ನ ಬೇರು ಪರಿಣಾಮಕಾರಿಯಾಗಿಯೇನು ಇಲ್ಲ. ಅಲ್ಲಲ್ಲಿ ಸಣ್ಣಪುಟ್ಟ ನಾಯಕರು ಇದ್ದರಾದರೂ ಜೆ.ಎಚ್. ಪಟೇಲ್ ನಂತರ ಪಕ್ಷವನ್ನು ಮುಂಚೂಣಿಗೆ ತರುವಂತಹ ನಾಯಕರು ಹುಟ್ಟಿಕೊಳ್ಳಲಿಲ್ಲ. ಹೀಗಾಗಿ ಮೈಸೂರು, ಮಂಡ್ಯ, ಹಾಸನದಲ್ಲಿರುವಂತೆ ಜೆಡಿಎಸ್ ತೇವಾಂಶ ಮಲೆನಾಡಿನಲ್ಲಿ ಇಲ್ಲವೆಂದೇ ಹೇಳಬೇಕು. ಆದರೂ ವ್ಯಕ್ತಿ ವರ್ಚಸ್ಸಿನ ಆಧಾರದ ಮೇಲೆ ಈ ಚುನಾವಣೆಯಲ್ಲಿ ಜೆಡಿಎಸ್ ಬೆಳೆ ತೆಗೆಯಲು ಹೊರಟಿದೆ.
3 ಕ್ಷೇತ್ರದ ಮೇಲೆ ಕಣ್ಣು: ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ-ಕೆಜೆಪಿ ಪೈಪೋಟಿ ನಡುವೆಯೇ ಮೂರು ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂಬ ಹಠ ಜೆಡಿಎಸ್ನದ್ದು. ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ್ಯಾನಾಯ್ಕ, ಭದ್ರಾವತಿಯಲ್ಲಿ ಅಪ್ಪಾಜಿಗೌಡ ಹಾಗೂ ಸೊರಬದಲ್ಲಿ ಮಧುಬಂಗಾರಪ್ಪ ಪಕ್ಷದ ಪ್ರಮುಖ ಹುರಿಯಾಳುಗಳು. ಈ ಮಧ್ಯೆ ಕೊನೆ ಕ್ಷಣದಲ್ಲಿ ಜೆಡಿಎಸ್ ಸೇರಿದ ಬೇಳೂರು ಗೋಪಾಲಕೃಷ್ಣ ಕೂಡ ಕಾಂಗ್ರೆಸ್ನ ಕಾಗೋಡು ತಿಮ್ಮಪ್ಪರ ನಿದ್ದೆಗೆಡಿಸಿದ್ದಾರೆ. ವಿಶೇಷವೆಂದರೆ, ಶಾರದಾ ಪೂರ್ಯಾನಾಯ್ಕರದ್ದು ಪೂರ್ಣ ಪ್ರಮಾಣದಲ್ಲಿ ವೈಯಕ್ತಿಕ ವರ್ಚಸ್ಸು. ಅಲ್ಲದೇ ಕ್ಷೇತ್ರದ ಜಾತಿ ಸಮೀಕರಣ, ಚುನಾವಣೆಗೆ ಪೂರ್ವ ಭಾವಿ ಸಿದ್ಧತೆ ಎಲ್ಲವೂ ಅವರನ್ನು ಕೈಹಿಡಿಯುವ ಸಾಧ್ಯತೆ ಇದೆ.
ಇನ್ನು ಭದ್ರಾವತಿಯಲ್ಲಿ ಹಳೇ ಹುಲಿ ಅಪ್ಪಾಜಿಗೌಡರು ಈ ಬಾರಿ ಎಲ್ಲ ತಂತ್ರಗಳನ್ನೂ ರೂಪಿಸಿದ್ದು ಗೆಲ್ಲುವ ಕುದುರೆ ಎಂದು ಭಾವಿಸಲಾಗಿದೆ. ಕೊನೆಕ್ಷಣದಲ್ಲಾದ ರಾಜಕೀಯ ಬೆಳವಣಿಗೆ (ಸಂಗಮೇಶ್ ಕೆಜೆಪಿ ಬೆಂಬಲಿತ ಅಭ್ಯರ್ಥಿ) ಹೊರತಾಗಿ ಅಪ್ಪಾಜಿಗೌಡರೇ ಭದ್ರಾವತಿಯಲ್ಲಿ ಹಾಟ್ ಫೇವರಿಟ್.
ಸೊರಬ ಕ್ಷೇತ್ರದಲ್ಲಿ ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ ಸೆಟೆದು ನಿಂತಿರುವ ಮಧು ಬಂಗಾರಪ್ಪ ಈ ಬಾರಿ ಗೆಲ್ಲಲೇ ಬೇಕೆಂಬ ಹಠತೊಟ್ಟು ಓಡಾಡುತ್ತಿದ್ದಾರೆ.
ತಮ್ಮ ತಂದೆಯ ಪ್ರಭಾವವನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಇದು ಅವರನ್ನು ಕೈ ಹಿಡಿಯುತ್ತದೆಯೇ ಎಂಬುದು ಯಕ್ಷಪ್ರಶ್ನೆ. ಆದರೆ, ಈ ಮೂರು ಕ್ಷೇತ್ರಗಳಲ್ಲೇ ಗೆಲ್ಲಲೇಬೇಕೆಂಬುದು ಜೆಡಿಎಸ್ ಛಲ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುವ ಉದ್ದೇಶದಿಂದ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರು ವರ್ಷದ ಹಿಂದೆಯೇ ಈ ಕ್ಷೇತ್ರದ ಹಲವು ಕಡೆ ಓಡಾಡಿ ಹವಾ ಸೃಷ್ಟಿಸಿದ್ದಾರೆ. ಇದೀಗ ಮತ್ತೆ ಜೆಡಿಎಸ್ ಅಲೆ ಎಬ್ಬಿಸಲು ಶಿವಮೊಗ್ಗಕ್ಕೆ ಬರುವವರಿದ್ದಾರೆ. ಒಟ್ಟಾರೆ ಕಾಂಗ್ರೆಸ್-ಬಿಜೆಪಿಗೆ ಹೇಳಿಮಾಡಿಸಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಬೆಳೆ ತೆಗೆಯಲು ಹೊರಟಿದೆ.
ನಗರ ಪ್ರಭಾವ...
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರಿಕಾಂತ್ ಅವರು ಪ್ರಬಲ ಎದುರಾಳಿ ಬಿಜೆಪಿಯ ಕೆ.ಎಸ್. ಈಶ್ವರಪ್ಪ ಅವರನ್ನು ಎದುರಿಸುತ್ತಿದ್ದಾರೆ. ಶ್ರೀಕಾಂತ್ ಹಿಂದಿನ ಚುನಾವಣೆಯಲ್ಲಿ ಸೋತರೂ ಕ್ಷೇತ್ರ ಬಿಟ್ಟವರಲ್ಲ. ಅಂದಿನಿಂದಲೇ ಪ್ರಯತ್ನ ಆರಂಭಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಚುನಾವಣೆ ಹಾಗೂ ನಗರಸಭೆ ಚುನಾವಣೆಯ ಯಶಸ್ಸು ಜೆಡಿಎಸ್ ಬಲವರ್ಧನೆಯಾಗಿರುವುದನ್ನು ತೋರಿಸುತ್ತಿದೆ.
ವೈಯಕ್ತಿಕವಾಗಿ ಹಲವು ಸಂದರ್ಭದಲ್ಲಿ ಜನರಿಗೆ ನೀಡಿರುವ ನೆರವನ್ನೇ ನೆಚ್ಚಿಕೊಂಡಿರುವ ಶ್ರೀಕಾಂತ್ ಅವರು ಜೆಡಿಎಸ್ನ ಸಾಂಪ್ರದಾಯಿಕ ಮತಗಳನ್ನು ಒಟ್ಟುಗೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಹಿಂದಿನ ಚುನಾವಣೆಯಲ್ಲಿ ನಮ್ಮ ಮತದಾರರು ಅನಿವಾರ್ಯವಾಗಿ ಬೇರೆ ಪಕ್ಷಕ್ಕೆ ಬೆಂಬಲಿಸಿದ್ದರು. ಈ ಬಾರಿ ಹಾಗಾಗದು ಎಂಬುದು ಜೆಡಿಎಸ್ ವಿಶ್ವಾಸ.