ತಮ್ಮನ ಹೆಂಡತಿಗೆ ಪೊಲೀಸ್ ಅಧಿಕಾರಿ ಕಿರುಕುಳ
ಬೆಂಗಳೂರು: ಜನರನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ತಮ್ಮ ಸಹೋದರನ ಪತ್ನಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಧಾರವಾಡದ ಎಸ್ಪಿ ಡಾ. ರವಿಕುಮಾರ್ ಎಂಬುವರು ತಮ್ಮ ಪತಿ ಕಿರಣ್ಕುಮಾರ್ ಅವರೊಂದಿಗೆ ಸೇರಿಕೊಂಡು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಭದ್ರಾವತಿಯ ಚಂದನಾ ಎಂಬುವರು ಆರೋಪಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡ ಅವರು, ತಮ್ಮ ಪತಿ ಹಾಗೂ ಅವರ ಸಹೋದರ ತಮಗೆ ವರದಕ್ಷಿಣೆ ಕಿರುಕುಳ ಹಾಗೂ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಇದಕ್ಕೆ ತಾವು ಬಗ್ಗದಾಗ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಿರಣ್ಕುಮಾರ್ ಅವರೊಂದಿಗೆ ವಿವಾಹದ ಸಂದರ್ಭದಲ್ಲಿ 4 ಲಕ್ಷ ನಗದು ಹಾಗೂ 1 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಆದರೆ, ಇಷ್ಟಕ್ಕೆ ಸುಮ್ಮನಾಗದ ನನ್ನ ಪತಿ ನಮಗೆ ದೈಹಿಕ ಹಿಂಸೆ ನೀಡುತ್ತಿದ್ದರು. ಈ ನಡುವೆ, ಧಾರವಾಡದ ಎಸ್ಪಿಯಾಗಿರುವ ಅವರ ಸಹೋದರ ಡಾ.ರವಿಕುಮಾರ್ ಅವರು, ಕರೆ ಮಾಡಿ ನನ್ನನ್ನು ಪ್ರೀತಿಸುವುದಾಗಿ ಕಿರುಕುಳ ನೀಡುತ್ತಿದ್ದಾರೆ.
ನಿಮ್ಮ ಮೇಲೆ ಮೊದಲಿನಿಂದಲೂ ಪ್ರೀತಿಯಿತ್ತು. ಪೋಷಕರು ನನ್ನ ಸಹೋದರನೊಂದಿಗೆ ವಿವಾಹ ಮಾಡಿದ್ದಾರೆ. ಅದಕ್ಕೆ ತಲೆಕೆಡಿಸಿಕೊಳ್ಳದೆ ತನ್ನೊಂದಿಗೆ ಸಂಬಂಧ ಇಟ್ಟುಕೋ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಈ ಸಂಬಂಧ ಭದ್ರಾವತಿಯ ಪೇಪರ್ ಟೌನ್ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನಾದರೂ, ರವಿಕುಮಾರ್ ಅವರು ಹಿರಿಯ ಅಧಿಕಾರಿಯಾದ್ದರಿಂದ ಯಾವುದೇ ಪೊಲೀಸರು ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಂದನಾ ತಂದೆ ಪಾಲಾಕ್ಷಪ್ಪ ಹಾಗೂ ತಾಯಿ ಜಯಮ್ಮ ಉಪಸ್ಥಿತರಿದ್ದರು.
ಜೂಜಾಟ ಬಂಧನ
ಭದ್ರಾವತಿ: ಪಟ್ಟಣದ ಸಮೀಪವಿರುವ ಹಳ್ಳಿಕೆರೆಯ ಅಡಕೆ ತೋಟದ ಪಕ್ಕದಲ್ಲಿ ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ ಐವರ ಮೇಲೆ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 3520 ನಗದು ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡು ಜೂಜಾಟ ಪ್ರಕರಣವನ್ನು ದಾಖಲಿಸಿದ್ದಾರೆ.
ಅಕ್ರಮ ಮದ್ಯ: ಸರಕು, ಬೈಕ್ ಜಪ್ತಿ
ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಮಕ್ಕೆ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ಭದ್ರಾವತಿ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ 88 ವಿಸ್ಕಿ ಬಾಟಲ್ ಸಾಗಿಸುತ್ತಿದ್ದ ಕೆಂಪೇಗೌಡ ಎಂಬಾತನನ್ನು ಬಂಧಿಸಿ ಸುಮಾರು 4000 ಮೌಲ್ಯದ ವಿಸ್ಕಿ ಬಾಟಲ್ಗಳು ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಸ್ವಾಭಾವಿಕ ಸಾವು
ರಂಗೇನಹಳ್ಳಿ ಗ್ರಾಮದ ವೇಲು ಅವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದಯ್ಯನಗುಂಡಿ ಗ್ರಾಮದ ವಾಸಿ ಶಿವರಾಜು ಎಂಬಾತ ಏ.23ರಂದು ಚಾನಲ್ನಲ್ಲಿ ಬಟ್ಟೆ ತೊಳೆಯುವಾಗ ಚಾನಲ್ನಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಅವರ ಶವ ಗುರುವಾರ ಕೆಂಚಮ್ಮನಹಳ್ಳಿ ಗ್ರಾಮದಲ್ಲಿ ಚಾನಲ್ನಲ್ಲಿ ಕಂಡುಬಂದಿದ್ದು, ಮೃತದೇಹವನ್ನು ಶವಸಂಸ್ಕಾರಕ್ಕಾಗಿ ತನ್ನ ವಶಕ್ಕೆ ನೀಡಬೇಕೆಂದು ಮೃತನ ಪತ್ನಿ ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಬೈಕ್ ಕಳವು
ಗುರುವಾರ ಬೆಳಗ್ಗೆ ವ್ಯಕ್ತಿಯೋರ್ವರು ಐಎನ್ಜಿ ವೈಶ್ಯ ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಬೈಕ್ ಕಳುವಾಗಿದೆ. ಬೆಳಗ್ಗೆ 11 ಗಂಟೆಗೆ ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಬೈಕ್ 12 ಗಂಟೆಗೆ ಬಂದು ನೋಡಲಾಗಿ ಅದು ಕಾಣೆಯಾಗಿತ್ತೆಂದು ಭದ್ರಾವತಿ ಹಳೇನಗರ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.
ಇದೇ ರೀತಿ ಬುಧವಾರ ಸಂಜೆ ಸಿಲ್ವರ್ಜ್ಯೂಬಿಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಸುಮುಖ್ ಎಂಬುವರ ಬೈಕ್ ಕೂಡಾ ಕಾಣೆಯಾಗಿದ್ದು, ನ್ಯೂಟೌನ್ ಪೊಲೀಸ್ಢಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.