ಪ್ರೊಟೋ ಟೈಪ್ಸ್ ಕಾರು ತಯಾರಿಸಿದ ವಿದ್ಯಾರ್ಥಿಗಳು
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.26
ನಗರದ ಜೆಎನ್ಎನ್ಸಿಇ ಕಾಲೇಜಿನ ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳ ತಂಡ ಕಾಲೇಜಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪ್ರೊಟೋ ಟೈಟ್ಸ್ ಮಾದರಿಯ ಕಾರುಗಳನ್ನು ತಯಾರಿಸಿದ್ದು, ಶುಕ್ರವಾರ ಕಾಲೇಜಿನ ಆವರಣದಲ್ಲಿರುವ ಜೆಎನ್ಎನ್ಸಿಇ ಮೋಟೋ ಕ್ಲಬ್ನಲ್ಲಿ ಈ ಕಾರುಗಳನ್ನು ಅನಾವರಣಗೊಳಿಸಲಾಯಿತು.
ಈ ಕಾರುಗಳನ್ನು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ವಾಹನಗಳನ್ನು ಚಲಾಯಿಸಿದರು.
ಮೆಕಾನಿಕಲ್ ವಿಭಾಗದ ವಿವಿಧ ಸೆಮಿಸ್ಚರ್ನ 72 ವಿದ್ಯಾರ್ಥಿಗಳನ್ನೊಳಗೊಂಡ 6 ತಂಡ ಈ ಅವಿಷ್ಕಾರ ಮಾಡಿದ್ದು, ಸರಿಸುಮಾರು 40- 45 ಸಾವಿರ ಖರ್ಚು ಮಾಡಲಾಗಿದೆ. ಒಟ್ಟು ಆರು ಎಂಜಿಯನ್ಗಳನ್ನು ತಯಾರಿಸಲಾಗಿದ್ದು, ಮೂರು ಎಂಜಿನ್ ಮತ್ತು ಉಪಕರಣಗಳನ್ನು ಕಾಲೇಜು ಒದಗಿಸಿತ್ತು. ಉಳಿದ ಮೂರು ಎಂಜಿನ್ ಮತ್ತು ಉಪಕರಣಗಳನ್ನು ವಿದ್ಯಾರ್ಥಿಗಳು ಒದಗಿಸಿಕೊಂಡು, ಸೆಪ್ಟೆಂಬರ್ 2012ರಲ್ಲಿ ಇದರ ಕೆಲಸ ಪ್ರಾರಂಭಿಸಿದ್ದರು.
ಕುತೂಹಲವಿತ್ತು: ಈ ಕುರಿತು ಮಾತನಾಡಿದ ವಿದ್ಯಾರ್ಥಿಗಳು, ನಮಗೆ ಎಂಜಿನ್ ತಯಾರಿಕೆ ಬಗ್ಗೆ ಪರಿಚಯ ಇರಲಿಲ್ಲ. ಅಲ್ಲದೇ, ಈ ಕೆಲಸಕ್ಕೆ ಬೇಕಾದಂತಹ ಬೆಸುಗೆ ಹಾಗೂ ಕೆಲ ಆಕೃತಿಗಳ ತಯಾರಿಕೆಯನ್ನು ಕಾಲೇಜಿನಲ್ಲಿ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ.
ಆದ್ದರಿಂದ ಇದಕ್ಕೆ ನಗರದ ಆಟೋ ಕಾಪ್ಲೆಂಕ್ಸ್ನ ಕೆಲವು ಕಾರ್ಯಾಗಾರವನ್ನು ಉಪಯೋಗಿಸಿಕೊಳ್ಳಲಾಯಿತು. ಅದರೊಂದಿಗೆ ಕಾರಿನ ಗೇರ್ ಬಾಕ್ಸ್ ಜೋಡಣೆ ಮಾಡುವ ಸಂದರ್ಭದಲ್ಲಿ ಕೆಲ ಮೆಕಾನಿಕ್ಗಳ ಮಾರ್ಗದರ್ಶನ ಪಡೆಯಲಾಯಿತು ಎಂದರು.
ಪ್ರಾಯೋಗಿಕ ಅಗತ್ಯ: ಮೆಕಾನಿಕಲ್ ವಿಭಾಗದ ವಿದ್ಯಾರ್ಥಿ ಆರ್. ಉಪೇಂದ್ರ ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿಗಳು ಇಂತಹ ಯೋಜನೆ ಕಡ್ಡಾಯವಾಗಿ ಮಾಡಬೇಕು. ಅಲ್ಲದೇ ಈ ಕುರಿತು ಹೆಚ್ಚಿನ ಮಾಹಿತಿಗಳು ಪುಸಕ್ತದಲ್ಲಿ ಇರುವುದಿಲ್ಲ.
ಇದನ್ನು ಪ್ರಾಯೋಗಿಕವಾಗಿ ಅನುಭವ ಪಡೆದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ನಮಗೂ ಇದರ ಬಗ್ಗೆ ಆಸಕ್ತಿ ಇತ್ತು. ಇದಕ್ಕೆ ಕಾಲೇಜು ಸಹ ಪ್ರೇರೇಪಿಸಿತ್ತು ಎಂದರು.
ಇವರಿಗೆ ಕಾಲೇಜು ಪ್ರಾಂಶುಪಾಲ ಡಾ. ಶ್ರೀನಿವಾಸ್ ರಾವ್ ಕಂಟೆ, ವಿಭಾಗದ ಮುಖ್ಯಸ್ಥ ಡಿ.ಎಸ್. ರಾಮಕೃಷ್ಣ ಹಾಗೂ ಸಿ. ಮಂಜುನಾಥ ಮತ್ತು ವಿ. ಅಶೋಕ ಮಾರ್ಗದರ್ಶನ ನೀಡಿದ್ದಾರೆ.