ಭಾರಿ ಗಾಳಿ, ಮಳೆ: ನೆಲಕಚ್ಚಿದ ಬಾಳೆ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಏ.26
ಗುರುವಾರ ಸಂಜೆ ಬಂದ ಗಾಳಿ, ಮಳೆ ತಾಲೂಕಿನ ವಿವಿಧೆಡೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು, ಬಾಳೆ ನೆಲಕಚ್ಚಿದರೆ ಮಾವಿನ ಫಸಲು ಸಂಪೂರ್ಣ ಹಾಳಾಗಿವೆ.
ಹಲವಾರು ಕಡೆ ವಿದ್ಯುತ್ ಕಂಬ ಮುರಿದು ಬಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಕಂಡುಬಂತು. ತಾಲೂಕಿನ ಕೆಲವೆಡೆ ಮನೆಗಳ ಹೆಂಚು ಹಾರಿ ಹೋಗುವಷ್ಟು ಗಾಳಿ ಬೀಸಿದೆ.
ಬಿಳಕಿ ಗ್ರಾಮದ ಚಂದ್ರಾನಾಯ್ಕ್ ಅವರ ನಾಲ್ಕು ಎಕರೆ ಜಮೀನಿನಲ್ಲಿ ಫಸಲಿಗೆ ಬಂದ ಬೆಳೆ ನಾಶವಾದರೆ, ಭೀಮಪ್ಪ ಎಂಬುವವರ ಮಾವಿನ ಫಸಲು ಸಂಪೂರ್ಣ ನೆಲಕ್ಕೆ ಬಿದ್ದು ಲಕ್ಷಾಂತರ ರುಪಾಯಿ ಬೆಳೆ ನಾಶವಾಗಿದೆ. ಅದೇ ಗ್ರಾಮದ ಚಂದ್ರನಾಯ್ಕ, ಬಪ್ಪಾನಾಯ್ಕ್ ಅವರಿಗೆ ಸೇರಿದ ಬೆಳೆಯೂ ನಾಶವಾಗಿದೆ.
ಕಾನಳ್ಳಿ ಗ್ರಾಮದಲ್ಲಿ ಚೆನ್ನವೀರ ಸ್ವಾಮಿ ಅವರ 5 ಎಕರೆ ಬಾಳೆ, ಎಕೆ ಗುಡ್ಡಪ್ಪ ಎಂಬುವವರ 1 ಎಕರೆ ಜಮೀನಿನಲ್ಲಿ ಬಾಳೆ ನಾಶವಾಗಿದೆ. ಬಸವನಂದೀಹಳ್ಳಿ ಗ್ರಾಮದಲ್ಲಿ ಬಸವರಾಜಪ್ಪ ಎಂಬುವವರ ಜಮೀನಿನಲ್ಲಿ 4 ಎಕರೆ ಜಮೀನಿನಲ್ಲಿ ಬಾಳೆ ನಾಶವಾಗಿ ಕನಿಷ್ಠ ರು. 10 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
ಚಂದ್ರಪ್ಪ ಎಂಬುವವರ ಅಡಿಕೆ ತೋಟದಲ್ಲಿ ಆಣೆಕಲ್ಲು ಮಳೆಗೆ ಅಡಿಕೆ ಸಂಪೂರ್ಣ ಹಾಳಾಗಿದೆ ಎನ್ನಲಾಗಿದೆ.
ತಾಳಗುಂದ ಗ್ರಾಮದ ಹೊರವಲಯದಲ್ಲಿ ಕೆರೆ ಏರಿಯ ಮೇಲೆ ಎತ್ತಿನಗಾಡಿಯ ಮೇಲೆ ಬರುತ್ತಿದ್ದ ಮಲ್ಲಪ್ಪ ಬಸವನಂದಿಹಳ್ಳೇರ್ ಎಂಬುವವರ ಗಾಡಿ ಗಾಳಿಗೆ ಕೆರೆ ಏರಿಯಿಂದ ಏತ್ತುಗಳ ಸಮೇತ ಉರುಳಿ ಕೆರೆಗೆ ಬಿದ್ದಿದ್ದು, ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ.
ಮೆಸ್ಕಾಂ ವರದಿ: ಶಿರಾಳಕೊಪ್ಪ ಭಾಗದಲ್ಲಿ ಗುರುವಾರ ಬೀಸಿದ ಭಾರಿ ಗಾಳಿಗೆ ಮಾಳಗೊಂಡನಕೊಪ್ಪ, ತಾಳಗುಂದ, ಬಿಸಲಹಳ್ಳಿ, ತಂಡಗುಂದ ಹಾಗೂ ಅಗ್ರಹಾರಮುಚಡಿ ಗ್ರಾಮಗಳಲ್ಲಿ ಒಟ್ಟು 25ಕ್ಕೂ ಹೆಚ್ಚು ಕಂಬಗಳು ಮುರಿದು ಬಿದ್ದಿವೆ ಎಂದು ತಿಳಿಸಿದೆ.
ಪರಿಹಾರಕ್ಕೆ ಒತ್ತಾಯ: ಮಳೆ ಕಡಿಮೆ ಆಗಿ ಮೊದಲೇ ಈ ಭಾಗದಲ್ಲಿ ಜನರು ಬರಗಾಲದ ಅಂಚಿನಲ್ಲಿ ಇರುವಾಗ ಕೊಳವೆ ಬಾವಿ ಮುಖಾಂತರ ಬೆಳೆಯಲಾಗಿದ್ದ ಬಾಳೆ, ಮಾವು ನಾಶವಾಗಿದ್ದು, ತಕ್ಷಣ ಅಧಿಕಾರಿಗಳು ರೈತರ ಸಹಾಯಕ್ಕೆ ಆಗಮಿಸಬೇಕು ಎಂದು ಸಂತ್ರಸ್ಥ ರೈತರು ಒತ್ತಾಯಿಸಿದ್ದಾರೆ.