ಸೋನಿಯಾ ಟೀಕಿಸುವ ನೈತಿಕತೆ ಬಿಜೆಪಿಗಿಲ್ಲ: ನಾಗರಾಜ್
ಶಿವಮೊಗ್ಗ: ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ವಿರುದ್ಧ ಹೇಳಿಕೆ ನೀಡುವ ಯಾವುದೇ ನೈತಿಕತೆ ಬಿಜೆಪಿ ಮುಖಂಡರಿಗಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸೇವಾದಳ ಸಮನ್ವಯ ಸಮಿತಿಯ ಸದಸ್ಯ ವೈ.ಎಚ್.ನಾಗರಾಜ್ ಹೇಳಿದರು. ವಿಧಾನಸಭಾ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ ಎಂದು ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ. ಸೋನಿಯಾ ಹಾಗೂ ರಾಹುಲ್ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯನ್ನು ಬಿಜೆಪಿ ಮುಖಂಡರು ಉಳಿಸಿಕೊಂಡಿಲ್ಲ ಎಂದರು.