ಕೆನರಾ ಬ್ಯಾಂಕ್ ಜಿಲ್ಲೆಗಳ ಶಾಖಾ ಪ್ರಬಂಧಕರ ಸಮ್ಮೇಳನ
ಶಿವಮೊಗ್ಗ: ಕುವೆಂಪು ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಶಾಖಾ ಪ್ರಬಂಧಕರ ಸಮ್ಮೇಳನವನ್ನು ಶುಕ್ರವಾರ ನಗರದಲ್ಲಿ ಆಯೋಜಿಸಲಾಗಿತ್ತು.
ಶಿವಮೊಗ್ಗ ವೃತ್ತ ಕಚೇರಿಯ ಉಪ ಮಹಾಪ್ರಬಂಧಕ ಎಂ.ಎಂ. ಚಿನಿವಾರ್ ಮಾತನಾಡಿ, ಮಾರ್ಚ್ 2013ರ ಅಂತ್ಯದ ವೇಳೆಗೆ ಬ್ಯಾಂಕಿನ ಒಟ್ಟು ವ್ಯವಹಾರ 6 ಲಕ್ಷ ಕೋಟಿಗೆ ಮೀರಿದ್ದು, ಶಿವಮೊಗ್ಗ ವೃತ್ತ ಕಚೇರಿಯ ವ್ಯಾಪ್ತಿಯಲ್ಲಿ ಒಟ್ಟು 3,480 ಕೋಟಿ ವ್ಯವಹಾರವನ್ನು ಮಾಡಿದೆ ಎಂದ ಅವರು, ಕೃಷಿ ಮತ್ತು ಆದ್ಯತಾ ರಂಗಕ್ಕೆ ಹೆಚ್ಚಿನ ಸಾಲ ಸೌಲಭ್ಯವನ್ನು ಒದಗಿಸಿದ್ದು, ಜಿಲ್ಲೆಯ ಸರ್ವಾಂಗೀಣ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡಿರುವುದಾಗಿ
ತಿಳಿಸಿದರು.
ಮಹಾ ಪ್ರಬಂಧಕರಾದ ಶಾಂತಾ ರಂಗಸ್ವಾಮಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ 5 ಸಾವಿರ ಕೋಟಿ ರುಪಾಯಿ ವ್ಯವಹಾರದ ಗುರಿಯನ್ನು ಹೊಂದಲಾಗಿದೆ. ನೂತನವಾಗಿ 15 ಶಾಖೆಗಳು ಹಾಗೂ 50 ಎಟಿಎಂ ಕೇಂದ್ರಗಳನ್ನು ತೆರೆಯುವ ಗುರಿ ಹೊಂದಿದೆ ಎಂದರು.
ಸಾಮಾಜಿಕ ಕಳಕಳಿ: ಬ್ಯಾಂಕಿನ ಹಲವಾರು ಶಾಖೆಗಳನ್ನು ನವೀಕರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಹಂತ ಹಂತವಾಗಿ ಎಲ್ಲಾ ಶಾಖೆಗಳನ್ನು ಗ್ರಾಹಕರ ಅನುಕೂಲಕ್ಕಾಗಿ ಆಧುನೀಕರಿಸುವುದಾಗಿ ಎಂದರಲ್ಲದೇ, ಶಿವಮೊಗ್ಗ ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ನೇರ ಹಣ ವರ್ಗಾವಣೆ ಯೋಜನೆಯಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುವುದಲ್ಲದೆ ಸಾಮಾಜಿಕ ಕಳಕಳಿಯಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ಸಾಮಾಜಿಕ ಜವಾಬ್ದಾರಿಯ ಯೋಜನೆಯಡಿಯಲ್ಲಿ ಗ್ರಾಮೀಣ ಜನರ ಆರೋಗ್ಯ ಸುಧಾರಣೆಯ ಪ್ರಯುಕ್ತ ಶಿವಮೊಗ್ಗ ತಾಲೂಕಿನ ಪುರಲೆ ಗ್ರಾಮದಲ್ಲಿ ಗ್ರಾಮೀಣ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಚಿಕಿತ್ಸೆಯನ್ನು ನೀಡುವ ವೈದ್ಯರನ್ನು ಉತ್ತೇಜಿಸಲು ಬ್ಯಾಂಕ್ ಪ್ರತಿ ತಿಂಗಳು 30 ಸಾವಿರ ಭತ್ಯೆ ನೀಡಲಿದೆ ಎಂದರು.