ಚುನಾವಣೆ: ಮತದಾರರಿಗೆ ವೇತನ ಸಹಿತ ರಜೆ
ಶಿವಮೊಗ್ಗ: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆಯನ್ನು ಮೇ 5 (ಭಾನುವಾರ) ರಂದು ನಡೆಸಲು ನಿರ್ಧರಿಸಿದ್ದು, ಈ ದಿನದಂದು ವೇತನ ಸಹಿತ ರಜೆ ಘೋಷಿಸಿದೆ.
ಮತದಾನದ ದಿನದಂದು ಎಲ್ಲಾ ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕರ್ನಾಟಕ ಔದ್ಯಮಿಕ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾಯ್ದೆ, 1963ರ ಕಲಂ 3(ಎ)ರನ್ವಯ ಮತ ಚಲಾಯಿಸಲು ವೇತನ ಸಹಿತ ರಜೆ ನೀಡುವಂತೆ ಎಲ್ಲಾ ಮಾಲೀಕರು, ನೀಯೋಜಕರಿಗೆ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಸೂಚಿಸಿದ್ದಾರೆ.
ಸಿಇಟಿ ವಿದ್ಯಾರ್ಥಿಗಳ ಗಮನಕ್ಕೆ
ಶಿವಮೊಗ್ಗ: ಮೇ 1 ಹಾಗೂ 2ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಶಿವಮೊಗ್ಗದ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಈ ಕಾಲೇಜನ್ನು ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಿ ಪ್ರವೇಶ ಪತ್ರಗಳಲ್ಲಿ ಕಾಲೇಜಿನ ಹೆಸರನ್ನು ಮುದ್ರಿಸಲಾಗಿದೆ. ಆದರೆ ಈ ಕಾಲೇಜನ್ನು ಚುನಾವಣೆಗೆ ಬಳಸಿಕೊಳ್ಳುತ್ತಿರುವುದರಿಂದ ಈ ಕೇಂದ್ರದ ವಿದ್ಯಾರ್ಥಿಗಳಿಗೆ ಕಮಲಾ ನೆಹರೂ ಕಾಲೇಜು (ಕಸ್ತೂರಬಾ ಕಾಲೇಜಿನ ಪಕ್ಕ) ಕೇಂದ್ರದಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ.ಕೆ. ನಾಗರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತಯಾಚನೆ
ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನ ಕುಮಾರ್ ಪರವಾಗಿ ನಗರದ ಬಿ.ಬಿ ರಸ್ತೆ ನಿವಾಸಿಗಳು ಭಾನುವಾರ ಮತ ಯಾಚಿಸಿದರು. ಇಲ್ಲಿನ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 8.30ಕ್ಕೆ ಪೂಜೆ ಸಲ್ಲಿಸಿ, ನಂತರ ಮತಯಾಚಿಸಿದರು. ತಿಮ್ಮಪ್ಪನಕೊಪ್ಪಲು, ಕುಂಬಾರಗುಂಡಿಯ ಸುತ್ತ- ಮುತ್ತ ಪ್ರಚಾರ ಮಾಡಿದರು. ಈ ವೇಳೆ ಹರಿಪ್ರಿಯ ಭಜನಾ ಮಂಡಳಿಯ ಅಧ್ಯಕ್ಷೆ ರುಕ್ಮಿಣಿ ವೇದವ್ಯಾಸ, ವಾರಿಜಾ ಜಗದೀಶ್, ಗಾಯತ್ರಿ ಕೃಷ್ಣಮೂರ್ತಿ, ಶೇಷಪ್ಪ ಸ್ಥಳೀಯರು ಇದ್ದರು.