ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದೇಶದ ಗಡಿಭಾಗ ರಕ್ಷಿಸುವಲ್ಲಿ ವಿಫಲ

Lingaraj Badiger
Updated On : 29 Apr 2013, 10:52 am

ಶಿವಮೊಗ್ಗ: ಕೇಂದ್ರ ಸರ್ಕಾರ ದೇಶದ ಗಡಿಭಾಗವನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಮುಖಂಡ ಅರುಣ್ ಜೇಟ್ಲಿ ಆರೋಪಿಸಿದರು.
 ಬಿಜೆಪಿ ಜಿಲ್ಲಾ ಘಟಕ ಭಾನುವಾರ ನಗರದ ಎನ್‌ಇಎಸ್ ಮೈದಾನದಲ್ಲಿ ಆಯೋಜಿಸಿದ್ದ ಪ್ರಮುಖ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಅದೇ ಪರಿಸ್ಥಿತಿ: 1962 ರಲ್ಲಿ ಚೀನಾ ಆಕ್ರಮಣ ಮಾಡಿದಾಗ ದೇಶದ ಪರಿಸ್ಥಿತಿ ಹೇಗಿತ್ತೋ ಇಂದು ಅದೇ ಪರಿಸ್ಥಿತಿ ಇದೆ. ಲಡಾಕ್‌ನಲ್ಲಿ ಚೀನಾ ಮಿಲಿಟರಿ ಪಡೆ 19 ಕಿ.ಮೀ. ಒಳಗಡೆ ಬಂದು ತನ್ನ ಬಾವುಟ ಹಾರಿಸಿದೆ. ಈ ಬಗ್ಗೆ ದೇಶದ ಪ್ರಧಾನಿ ಅವರನ್ನು ಪ್ರಶ್ನಿಸಿದರೆ, ಅದು ಸ್ಥಳೀಯ ಮಟ್ಟದ ಸಮಸ್ಯೆ ಎಂದು ಹಗುರವಾದ ಮಾತುಗಳನ್ನಾಡುತ್ತಾರೆ. ಇದರಿಂದ ಪ್ರಧಾನಿ ಎಷ್ಟು ದುರ್ಬಲ ಎಂದು ತಿಳಿಯುತ್ತದೆ ಎಂದು ವಿಷಾದಿಸಿದರು.
 ಕಾರ್ಗಿಲ್ ಯುದ್ಧದ ನಂತರ ಪಾಕ್‌ನಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಆಕ್ರೋಶವಿತ್ತು. ಅದೇ ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್‌ನ್ನು ದೂರವಿಡಲಾಗಿತ್ತು. ಆದರೆ, ಇಂದಿನ ಸರ್ಕಾರ ಇಂತಹ ತೀರ್ಮಾನ ತೆಗೆದುಕೊಳ್ಳಲು ವಿಫಲವಾಗಿದೆ. ಇಂತಹ ದುರ್ಬಲರಿಗೆ ದೇಶವನ್ನು ಕೊಟ್ಟರೆ ದೇಶದ ಸ್ಥಿತಿ ಅಧೋಗತಿ ತಲುಪಲಿದೆ ಎಂದರು.
ಸರಿಯಾದ ಕ್ರಮವಿಲ್ಲ: ಇನ್ನೂ ಬಾಂಗ್ಲದೇಶದಿಂದ ನಮ್ಮ ದೇಶಕ್ಕೆ ನಸುಳುಕೊರರು ಬರುತ್ತಿದ್ದರೂ ಈ ಬಗ್ಗೆ ಕಾಂಗ್ರೆಸ್ ಸರಿಯಾದ ಕ್ರಮ ಕೈಗೊಂಡಿಲ್ಲ. ಒಂದು ಕಾಲದಲ್ಲಿ ಬಹುಸಂಖ್ಯಾತರಾಗಿದ್ದ ಬೋಡೋ ಜನಾಂಗದವರು ಇಂದು ಅಲ್ಪಸಂಖ್ಯಾತರಾಗಿದ್ದಾರೆ. ಇಂತಹ ವಿಷಯಗಳನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಓಟು ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ದೇಶದ ಭದ್ರತೆ ವಿಚಾರದಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
 ಒಂದು ದೇಶದಲ್ಲಿ ಕಸಬ್‌ನಂತಹ ದೇಶದ್ರೋಹಿಗೆ ರು. 7 ಕೋಟಿ ವೆಚ್ಚ ಮಾಡುತ್ತದೆ. ಆದರೆ, ನಮ್ಮ ದೇಶದ ಪ್ರಜೆ ಸರಬ್‌ಜಿತ್‌ಸಿಂಗ್‌ಗೆ ಪಾಕಿಸ್ತಾನದಲ್ಲಿ ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದ ಅವರು, ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಆದರೆ ಇತರೆ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಕೇಂದ್ರ ಸರ್ಕಾರ ಸರಿಯಾದ ಆರ್ಥಿಕ ನಿಯಮ ಜಾರಿಗೊಳಿಸದೆ ನಿರ್ಲಕ್ಷ್ಯ ತೋರಿದೆ ಎಂದರು.
ಹಗರಣ ಸರಮಾಲೆ: ಕಾಂಗ್ರೆಸ್ 2ಜಿ, ಎರ್‌ಲೈನ್ಸ್ ಹಗರಣಗಳನ್ನು ಮಾಡುತ್ತ ಬಂದಿದೆ. ಸುಪ್ರೀಂ ಕೋರ್ಟ್ ಹಗರಣಗಳ  ಸಿಬಿಐ ತನಿಖೆಗೆ ಒಪ್ಪಿಸಿದೆ. ಆದರೆ, ಸಿಬಿಐ ವರದಿಯನ್ನೆ ನಾಶ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
 ಅಲ್ಲದೇ, ಸಿಬಿಐ ಗುಮ್ಮ ತೋರಿಸಿ ಎಸ್.ಪಿ, ಬಿಎಸ್‌ಪಿ ಪಕ್ಷಗಳನ್ನು ಎದುರಿಸಿ ಪ್ರತಿ ಬಾರಿ ಕೇಂದ್ರ ಸರ್ಕಾರವನ್ನು ರಕ್ಷಿಸಿಕೊಂಡು ಬರುತ್ತಿದೆ. ಇದು ಕಾಂಗ್ರೆಸ್ ಪರಿಸ್ಥಿತಿ ಎಂದು ಲೇವಡಿ ಮಾಡಿದರು.
ಪಕ್ಷ ಆಯ್ಕೆ ಮಾಡಿ: ಈಶ್ವರಪ್ಪ: ರಾಜ್ಯದ ಕಾಂಗ್ರೆಸ್ ನಾಯಕರು ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ದು, ಮತದಾರರನ್ನು ಗೊಂದಲದಲ್ಲಿ ಸಿಲುಕಿಸಿದ್ದಾರೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
 ಕಾಂಗ್ರೆಸ್‌ನ ಸಿದ್ದರಾಮಯ್ಯರನ್ನು ಸೋಲಿಸಲು ಪರಮೇಶ್ವರ್, ಪರಮೇಶ್ವರ್‌ರನ್ನು ಸೋಲಿಸಲು ಸಿದ್ದರಾಮಯ್ಯ ಹಾಗೂ ಶಾಮನೂರು ಶಿವಶಂಕರಪ್ಪ ಸೋಲಿಸಲು ಪರಮೇಶ್ವರ ಪಣತೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ದುರ್ಬಲ: ರಾಜ್ಯದ 224 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ದುರ್ಬಲರಾಗಿದ್ದಾರೆ. ಆದನ್ನು ಕೇಂದ್ರದ ನಾಯಕರು ಸಿದ್ದಪಡಿಸಬೇಕಾಯಿತು. ಆದರೆ, ಬಿಜೆಪಿಯಲ್ಲಿ ಈ ಸಮಸ್ಯೆ ಇಲ್ಲ.
  ವಿಧಾನಸಭಾ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳನ್ನು ರಾಜ್ಯ ನಾಯಕರು ಹಾಗೂ ಸ್ಥಳೀಯ ಮುಖಂಡರು ಆಯ್ಕೆ ಮಾಡಬೇಕು ಎಂದು ಕೇಂದ್ರದ ಬಿಜೆಪಿ ನಾಯಕರು ತಿಳಿಸಿದ್ದರು. ಅದರಂತೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ ಎಂದರು.
 ಶಾಮನೂರು ಶಿವಶಂಕರಪ್ಪ, ಸಿದ್ದರಾಮಯ್ಯ, ಪರಮೇಶ್ವರ ತಮ್ಮ ವೈಯಕ್ತಿಕ ಪಟ್ಟಿಯನ್ನು ಕೇಂದ್ರದ ಮುಂದಿಟ್ಟಿದ್ದರು. ಅದು ಜಾತಿ ಆಧಾರಿತ ಪಟ್ಟಿಯಾಗಿದೆ. ಇಂತಹ ನಾಯಕರನ್ನು ಆಯ್ಕೆ ಮಾಡಿದರೆ ರಾಜ್ಯದಲ್ಲಿ ಅವ್ಯವಸ್ಥೆ ಉಂಟಾಗುತ್ತದೆ ಎಂದು ಆಪಾದಿಸಿದರು.
ಕೇಂದ್ರದ ನಿರ್ಲಕ್ಷ್ಯ:  ರಾಜ್ಯವನ್ನು ಕಳೆದ 60 ವರ್ಷಗಳಿಂದ ಜೆಡಿಎಸ್, ಕಾಂಗ್ರೆಸ್ ಕತ್ತಲೆಯಲ್ಲಿ ಮುಳುಗಿಸಿವೆ. ಇದರಿಂದ ಹೊರತರಬೇಕು ಎಂದು ಬಿಜೆಪಿ ಶ್ರಮಿಸಿತ್ತು. ಆದರೆ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರನ್ನು ನಿರ್ಲಕ್ಷ್ಯ ಮಾಡಿ ಮಲತಾಯಿ ಧೋರಣೆ ಮಾಡಿತು. ಬಿಜೆಪಿ ರಾಷ್ಟ್ರೀಯ ನಾಯಕರು ಶ್ರಮದಿಂದಾಗಿ ಬಿಜಾಪುರದಲ್ಲಿ ಎನ್‌ಟಿಪಿಎಸ್ ವಿದ್ಯುತ್ ತಯಾರಿಕ ಘಟಕ ಸ್ಥಾಪನೆಯಾಗಿದೆ ಎಂದರು.
 ಈ ಚುನಾವಣೆ ಒಬ್ಬ ನಾಯಕನನ್ನು ಆಯ್ಕೆ ಮಾಡುವುದಲ್ಲ, ಬದಲಿಗೆ ಬಿಜೆಪಿ ಪಕ್ಷವನ್ನು ಆಯ್ಕೆ ಮಾಡುವುದಾಗಿದೆ. ಆದ್ದರಿಂದ ಉಳಿದ 5 ದಿನಗಳು ಬಿಜೆಪಿ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರಲ್ಲದೇ, ಬಿಜೆಪಿಗೆ ಆಡಳಿತ ಅನುಭವವಾಗಿದೆ. ಕಾಂಗ್ರೆಸ್ ಗೊಂದಲದ ಗೂಡಾಗಿದೆ ಎಂದರು.
 ವೇದಿಕೆಯಲ್ಲಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಎಚ್. ರಾಜ, ಪಳನಿಸ್ವಾಮಿ, ವಿಧಾನ ಪರಿಷತ್ಸ್‌ದಸ್ಯ ಭಾನುಪ್ರಕಾಶ್, ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ಕಾಡಾ ಅಧ್ಯಕ್ಷ ಗಿರೀಶ್ಪ್‌ಟೇಲ್, ಸೂಡಾ ಅಧ್ಯಕ್ಷ ದತ್ತಾತ್ರೆ, ಮಾಜಿ ಅಧ್ಯಕ್ಷ ಜ್‌ಞಾನೇಶ್ವರ, ನಗರಸಭೆ ಮಾಜಿ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement