ಪಶ್ಚಿಮ ಘಟ್ಟ ಉಳಿಸುವವರಿಗೆ ಬೆಂಬಲ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.28
ಪಶ್ಚಿಮ ಘಟ್ಟ ಉಳಿಸಿ ಅಭಿಯಾನದ ಸಹಭಾಗಿಗಳು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಶ್ಚಿಮ ಘಟ್ಟದ ಉಳಿವಿಗಾಗಿ ಪ್ರತಿಜ್ಞೆ ಮಾಡುವ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿದೆ.
ಸಂಚಾಲಕ ಜನಾರ್ದನ ಜಿ.ಎಲ್. ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ಪಶ್ಚಿಮ ಘಟ್ಟ ವ್ಯಾಪ್ತಿಯ ವಿಧಾನಸಭಾ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಈ ಕುರಿತು ಮನವಿ ಮಾಡಿದೆ ಎಂದರು.
ರಕ್ಷಣೆಗೆ ಪಣ: ಪಶ್ಚಿಮ ಘಟ್ಟ ಉಳಿಸಿ ಅಭಿಯಾನ ಕರ್ನಾಟಕವು ಪಶ್ಚಿಮ ಘಟ್ಟದ ಉಳಿವಿಗಾಗಿ ಜನರಲ್ಲಿ ಅರಿವು ಮೂಡಿಸಿ ಅವುಗಳ ರಕ್ಷಣೆಗೆ ಪಣತೊಡುವಂತೆ ಮಾಡುತ್ತಿದೆ. ಪಶ್ಚಿಮ ಘಟ್ಟದ ಉಳಿವಿಗೆ ಈ ಭಾಗದಲ್ಲಿ ಕೈಗೊಳ್ಳಬೇಕಾದ ಕೆಲವು ನಿಲವು ಅನುಷ್ಠಾನ ಮಾಡಲೇಬೇಕಾಗಿದೆ.
ಈ ಕೆಲಸ ವಿಧಾನಸೌಧದಲ್ಲಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಜವಾಬ್ದಾರಿಯಿಂದ ವಿಧಾನಸಭೆಯಲ್ಲಿ ಮಂಡಿಸಿ ಜಾರಿಗೆ ತರಲು ಕಟಿಬದ್ಧ ರಾಗಬೇಕಾಗಿದೆ ಎಂದು ಜನಾರ್ಧನ್ ಹೇಳಿದರು.
ಆದ್ದರಿಂದ ಎಲ್ಲ ಅಭ್ಯರ್ಥಿಗಳು ಈ ಒತ್ತಾಯಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಘೋಷಿಸಿದಲ್ಲಿ ಪಶ್ಚಿಮ ಘಟ್ಟದ ಜನರ ಬೆಂಬಲ ನಿಮಗೆ ಸಿಗಲಿದೆ ಎಂದು ಹೇಳಿದ್ದು, ಅಭ್ಯರ್ಥಿಗಳ ಮತ್ತು ಪಕ್ಷಗಳ ಈ ಬಗ್ಗೆ ಪ್ರತಿಕ್ರಿಯಿಸಬೇಕೆಂದು ಕೋರಿದ್ದಾರೆ.
ಅವರ ಒತ್ತಾಯಗಳು ಹೀಗಿವೆ.
- ಸಹ್ಯಾದ್ರಿ ಪರ್ವತಗಳಲ್ಲಿ ಉಳಿದಿರುವ ನೈಸರ್ಗಿಕ ಅರಣ್ಯವನ್ನು ರಕ್ಷಿಸಿ ದಕ್ಷಿಣ ಭಾರತದ ನೀರಿನ ಸುರಕ್ಷತೆಯನ್ನು ಕಾಪಾಡುವುದು.
- ಸ್ಥಳೀಯ ಜಾತಿಯ ಸಸ್ಯಗಳನ್ನು ನೆಡುವದು, ಏಕ ಜಾತಿಯ ನೆಡುತೋಪನ್ನು ನಿಷೇಧಿಸುವುದು.
- ರಾಷ್ಟ್ರೀಯ ಉದ್ಯಾವನಗಳಿಗಾಗಿ ಬುಡಕಟ್ಟು ಜನರನ್ನು, ಅರಣ್ಯ ನಿವಾಸಿಗಳನ್ನು ಒಕ್ಕಲು ಎಬ್ಬಿಸಕೂಡದು. ಅವರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಜೀವನ ಮಾಡುವ ಅವಕಾಶ ನೀಡಬೇಕು.
- ಅರಣ್ಯ ಹಕ್ಕು ಕಾಯಿದೆಯನ್ನು ಜಾರಿಗೆ ತರಬೇಕು. ಸಾಮುದಾಯಿಕ ಅರಣ್ಯದ ಹಕ್ಕನ್ನು ನೀಡುವುದು.
- ಅಣೆಕಟ್ಟುಗಳ ನಿರ್ಮಾಣದ ನೀತಿಯನ್ನು ಪುನಃ ವಿಮರ್ಶಿಸಬೇಕು. ಕಿರು ಜಲ ವಿದ್ಯುತ್ ಯೋಜನೆಗಳನ್ನು ಪಶ್ಚಿಮಘಟ್ಟ ಪ್ರದೇಶದಲ್ಲಿ ನಿಷೇಧಿಸಬೇಕು.
- ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿಸರ್ಗ ಸಂಪತ್ತನ್ನು ಅಭಿವೃದ್ಧಿಪಡಿಸುವ ಪ್ರಯತ್ನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
- ಪಶ್ಚಿಮ ಘಟ್ಟ ಪ್ರದೇಶವನ್ನು ಕುಲಾಂತರಿ (ಬಾಳೆ ಹಾಗೂ ರಬ್ಬರ್ ಇತ್ಯಾದಿ) ತಳಿಗಳಿಂದ ಮುಕ್ತವಾದ ಪ್ರದೇಶವೆಂದು ಘೋಷಣೆ ಮಾಡಿ ಅದರಲ್ಲಿನ ಜೀವವೈವಿಧ್ಯತೆಯನ್ನು ಕಾಪಾಡಬೇಕು.
- ಪಶ್ಚಿಮ ಘಟ್ಟ ಪ್ರದೇಶವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಣೆ ಆಗಿರುವುದನ್ನು ಬೆಂಬಲಿಸಬೇಕು.