ಬೇಂದ್ರೆ ಕನ್ನಡ ಸಾಹಿತ್ಯದ ಅಪರೂಪದ ವ್ಯಕ್ತಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.28
ದ.ರಾ. ಬೇಂದ್ರೆಯವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅಪರೂಪದ ವ್ಯಕ್ತಿ. ಶಬ್ಧದಮೇಲೆ ಲೀಲೆ ತೋರಿದವರು. ಶಬ್ಧದ ಮೂಲಕವೇ ಸಂಸ್ಕಾರ ತೋರಿದವರು. ಅವರ ಸಾಹಿತ್ಯದ ಚಮತ್ಕಾರ ಅರಿಯಲು ಅವರ ಕಾವ್ಯಭಾಷೆಯನ್ನು ಅರಿಯಬೇಕಿದೆ ಎಂದು ಸಾಗರದಲ್ಲಿ ಶಿಕ್ಷಣ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರಶಾಸ್ತ್ರಿ ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ನಗರದ ಶರಾವತಿ ನಗರ ಬಡಾವಣೆಯಲ್ಲಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 92ನೇ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದ.ರಾ. ಬೇಂದ್ರೆಯವರ ಸಾಹಿತ್ಯದಲ್ಲಿನ ರಸಸ್ವಾದ ವಿಚಾರವಾಗಿ ಮಾತನಾಡಿದರು.
ನಾದ ತಿಳಿದರೆ ಸಾಹಿತ್ಯ ತಿಳಿಯುತ್ತೆ: ನಾವು ಪ್ರತಿಯೊಬ್ಬರೂ ಸಾಹಿತ್ಯ ಆರಾದನೆ ಮಾಡುವುದನ್ನು ಕಲಿಯಬೇಕು. ಓದಲು ಒಂದಷ್ಟು ಸಮಯ ಮೀಸಲಿಡಬೇಕು, ಬೇಂದ್ರೆ ಸಾಹಿತ್ಯ ಜಾಗತಿಕರಣದ ಈ ಕಾಲಘಟ್ಟದಲ್ಲಿ ಅತ್ಯಂತ ಮಹತ್ವದ ಮಾರ್ಗದರ್ಶಿಯಾಗಲಿದೆ. ಕಾರಣ ನಮ್ಮೆಲ್ಲ ಲೇಖನಗಳು, ಬರಹಗಳು ಇಂಗ್ಲೀಷ್‌ಕರಣವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ಬೇಂದ್ರೆ ಅವರ ಸಾಹಿತ್ಯದಲ್ಲಿ ಪೇಟೆ ಪ್ಯಾಟಿಯಾಗಿಯೇ ನಮಗೆ ಸಿಗುತ್ತೆ. ಅವರ ಸಾಹಿತ್ಯದಲ್ಲಿನ ನಾದ ತಿಳಿದರೆ ಸಾಹಿತ್ಯ ಅರ್ಥವಾಗುತ್ತೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಹಾಸ್ಯ ಮತ್ತು ಮಿಮಿಕ್ರಿ ಕಲಾವಿದರಾದ ಪಟ್ಟಾಭಿರಾಮ ಸೂಳ್ಯ ಅನೇಕ ಪ್ರದರ್ಶನಗಳನ್ನು ನೀಡಿ ಸೇರಿದ್ದ ಸಭಿಕರನ್ನು ರಂಜಿಸಿದರು.
ಸ್ಥಳೀಯ ಕಲಾವಿದರಾದ ಜನಪದ ಗಾಯಕ ಕೆ. ಯುವರಾಜ್, ಗಾಯಕಿಯರಾದ ಸುರೇಖ ಹೆಗಡೆ, ನಾಗಮಣಿ ಆನಂತರಾಮ್, ದಾಕ್ಷಾಯಿಣಿ ಮತ್ತು ಕೆ. ರಾಜ್‌ಕುಮಾರ್ ಹಾಗೂ ತಂಡದವರಿಂದ ಭಾವಗೀತೆ, ಜನಪದ ಗೀತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕವಿಗಳಾದ ಕೆ. ಓಂಕಾರಪ್ಪ, ಡಿ. ಗಣೇಶ್ ಮತ್ತು ಚುಟುಕು ವಾಚನದಲ್ಲಿ ಡಾ. ಶರಶ್ಚಂದ್ರ ರಾನಡೆ, ಲತಾ ನಾಗರಾಜ್ ಅವರುಗಳು ಕವನ ವಾಚಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ಮಧುಸೂದನ ಐತಾಳ್ ಸ್ವಾಗತಿಸಿದರು. ಮಹಾದೇವಿ ಅವರು ಅತಿಥಿಗಳ ಪರಿಚಯ ಮಾಡಿದರು. ಶೀಲಾ ಸುರೇಶ್ ನಿರೂಪಿಸಿದರು.
ಪ್ರಕಾಶ್ ಕಮ್ಮಾರ್, ಸಂಪತ್ ಕುಮಾರ್, ಇ. ಜಯಣ್ಣ, ಎಸ್. ದೇವಾನಂದ, ಉಮೇಶ್ ಆರಾಧ್ಯ ಕಾರ್ಯಕ್ರಮ ನಿರ್ವಹಿಸಿದರು.