ಮತದಾನ ಜಾಗೃತಿ ಸಾರಿದ ನವ ಜೋಡಿ
ಕ.ಪ್ರ.ವಾರ್ತೆ ,ಶಿವಮೊಗ್ಗ , ಏ.28
ಮತದಾರರಿಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆದರೆ, ಹೊಸನಗರದ ಜೋಡಿಯೊಂದು, ನವಜೀವನಕ್ಕೆ ಕಾಲಿಡುವ ಸಂದರ್ಭದಲ್ಲಿ ಮಾಂಗಲ್ಯಂ ತಂತುನಾನೇನಾ ಜೊತೆಗೆ ಕಡ್ಡಾಯ ಮತದಾನ ಮಾಡಿ ಅಂತಲೂ ಸಾರಿದರು. ಇವರ ವಿವಾಹ ಮಹೋತ್ಸವಕ್ಕೆ ಜಿಲ್ಲಾಡಳಿತ ಕೂಡ ಸಾಥ್ ನೀಡಿತು.
ಹೊಸನಗರದ ಕೆಂಚನಾಳ್ ಗ್ರಾಮದ ಗಣೇಶ್ ಕೆಂಚನಾಲ ಹಾಗೂ ಆನಂದಪುರದ ಉಮಾರಾಣಿ ಹೊಸ ಬಳಿಗೆ ಹೆಜ್ಜೆ ಇರಿಸಿದರು. ಎಲ್ಲಾ ವಿವಾಹಗಳ ರೀತಿಯಲ್ಲಿ ಇವರೂ ವಿವಾಹ ಬಂಧಕ್ಕೆ ಕಾಲಿರಿಸುವ ಬದಲು, ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಯೋಚಿಸಿದರು. ಅದರಂತೆ ಕಡ್ಡಾಯ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡುವ ಮೂಲಕ ವಿವಾಹ ಬಂಧಕ್ಕೆ ಒಳಗಾದರು.
ಗಣೇಶ್ ಹಾಗೂ ಉಮಾರಾಣಿ ಅವರ ಯೋಚನೆಯನ್ನು ಮೆಚ್ಚಿ ಜಿಲ್ಲಾಡಳಿತವೇ ಮದುಮಕ್ಕಳ ಭಾವಚಿತ್ರವಿರುವ ಫ್ಲೆಕ್ಸ್, ಬ್ಯಾನರ್ಗಳನ್ನು ಪೂರೈಸಿ, ಮದುವೆಗೆ ಆಗಮಿಸಿದ್ದವರಲ್ಲಿ ಮತದಾನದ ಮಹತ್ವ ಸಾರುವ ಪ್ರಯತ್ನ ಮಾಡಿತು.
ಮನೆ ತುಂಬಾ ಫ್ಲೆಕ್ಸ್, ಬ್ಯಾನರ್: ಗಣೇಶ್ ಮೂಲತ- ರಂಗಭೂಮಿ ಕಲಾವಿದ. ಇದೀಗ ಆನಂದಪುರದ ಜ್ಞಾನ ಸಹ್ಯಾದ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ. ಅದೇ ರೀತಿ ಉಮಾರಾಣಿ ಕೂಡ ಅದೇ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೊನೆಗೆ ಹಿರಿಯರ ಒಪ್ಪಿಗೆ ಪಡೆದು ವಿವಾಹ ಬಂಧಕ್ಕೂ ಒಳಗಾಗುವ ಅವಕಾಶವೂ ಸಿಕ್ಕಿತು. ಆದರೆ, ಎಲ್ಲರಂತೆ ಮದುವೆ ಆಗುವುದಕ್ಕೆ ಗಣೇಶ್ ಹಾಗೂ ಉಮಾರಾಣಿ ಅವರಿಗೆ ಇಷ್ಟವಿರಲಿಲ್ಲ. ಚುನಾವಣೆ ಇರುವುದರಿಂದ ಮತದಾರರಲ್ಲಿ ಜಾಗೃತಿ ಮೂಡಿಸಿ, ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರ ಮಹತ್ವ ಸಾರುವುದೇ ಸೂಕ್ತ ಎಂದು ನಿರ್ಧರಿಸಿದರು. ಅದರಂತೆ ಮದುವೆ ಮನೆಯ ತುಂಬಾ ಫ್ಲೆಕ್ಸ್, ಬ್ಯಾನರ್ ಹಾಕಿದ್ದರು.
ಇನ್ನೊಂದೆಡೆ ಜಿಲ್ಲಾಡಳಿತವೂ ಮತದಾನದ ಮಹತ್ವ ಸಾರಲು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಮಧ್ಯೆ ಗಣೇಶ್, ಉಮಾರಾಣಿ ಅವರ ಯೋಜನೆಗೆ ಬಗ್ಗೆ ತಿಳಿದುಕೊಂಡು, ಅವರ ಕಾರ್ಯದಲ್ಲಿ ಕೈ ಜೋಡಿಸಲು ನಿರ್ಧರಿಸಿತು. ಮತದಾನದ ಅಗತ್ಯತೆ ಸಾರುವ ಬ್ಯಾನರ್, ಫ್ಲೆಕ್ಸ್ಗಳನ್ನು ನೀಡಿ, ಮದುವೆಗೆ ಬಂದವರಿಗೆ ತಾಂಬೂಲದ ಜೊತೆಗೆ ಮತ ಜಾಗೃತಿಯ ಕಿವಿ ಮಾತುಗಳನ್ನು ಸಹ ನೀಡಲಾಯಿತು. ಮದುವೆಯ ಹಿಂದಿನ ದಿನ ರಾತ್ರಿ (ಏ.27) ಮತದಾನ ಜಾಗೃತಿ ಮೂಡಿಸಲು ನಾಟಕ ಏರ್ಪಡಿಸಲಾಗಿತ್ತು.