ವಿಧ್ವಂಸಕ ಕೃತ್ಯ ತಡೆಯಲು ಆಪ್ತ ಸಮಾಲೋಚನೆ ಅಗತ್ಯ: ಡಾ. ಪೈ
ಶಿವಮೊಗ್ಗ: ಪ್ರಸ್ತುತ ಯವ ಜನಾಂಗದವರು ಕ್ರೌರ್ಯ, ಹಿಂಸೆ ಹಾಗೂ ವಿದ್ವಂಸಕ ಕೃತ್ಯಗಳ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ಇದನ್ನು ತಡೆಯಲು ಯುವಕರಿಗೆ ತಜ್ಞ ವೃತ್ತಿ ನಿರತರಿಂದ ಆಪ್ತ ಸಮಾಲೋಚನೆಗೆ ಒಳಪಡಿಸಬೇಕು ಎಂದು ಮನೋವೈದ್ಯ ಡಾ. ಆಶೋಕ ಪೈ ಅಭಿಪ್ರಾಯಪಟ್ಟರು.
ನಗರದ ಹೊರವಲಯದಲ್ಲಿರುವ ಪಿಇಎಸ್ಐಟಿಎಂ ಕಾಲೇಜಿಲ್ಲಿ ಭಾನುವಾರ ಆಯೋಜಿಸಿದ್ದ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು, ಯುವಕರು ಮದ್ಯವೆಸನಿಗಳಾಗಿ ಅನೇಕ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ಇಳಿ ವಯಸ್ಸಿನಲ್ಲೇ ಅವರ ಆರೋಗ್ಯ ಹದಗೆಡುತ್ತದೆ. ಅಲ್ಲದೇ, ವಿದ್ವಾಂಸಕ ಕೃತ್ಯಗಳಿಗೆ ಪ್ರೇರೆಪಿಸುತ್ತದೆ. ಆದ್ದರಿಂದ ಮದ್ಯಪಾನದಿಂದ ದೂರವಿರಬೇಕು ಎಂದರು.
ಲೈಂಗಿಕ ಶಿಕ್ಷಣ ನೀಡಿ: ಡಬ್ಲೂಎಚ್ಓ-2012ರ ವರದಿ ಪ್ರಕಾರ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದ ಅವರು, ಇಂದು ಹೆಣ್ಣು ಮಕ್ಕಳ ಮೇಲೆ ಆತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪ್ರೌಢ ಶಿಕ್ಷಣದಿಂದಲೇ ಹಂತ-ಹಂತವಾಗಿ ಲೈಂಗಿಕ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ಚಂದ್ರಮೋಹನ್, ಕಾಲೇಜಿನ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ, ಮುಂದಿನ ವರ್ಷದ ಯೋಜನೆಗಳ ಕುರಿತು ತಿಳಿಸಿದರು.
ಇದೇ ವೇಳೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪುಸ್ತಕ ಕೂಪನ್ಗಳನ್ನು ವಿತರಿಸಲಾಯಿತು. ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಆರ್. ನಾಗರಾಜ್, ಎಸ್. ವಿನಯ್, ಸ್ವಾತಿ ಮತ್ತು ಬೋಧಕ ಹಾಗೂ ಬೋಧಕೇತರ ವರ್ಗದವರು ಇದ್ದರು.