ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಂಗೀತ ಸಾಧನೆಗೆ ತಾದಾತ್ಮ್ಯ ಅಗತ್ಯ: ಅಕ್ಷರ

Lingaraj Badiger
Updated On : 29 Apr 2013, 10:43 am

ಕ.ಪ್ರ.ವಾರ್ತೆ, ಸಾಗರ, ಏ.28
ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಲು ಸನ್ಯಾಸಿಯಲ್ಲಿರುವ ತಾದಾತ್ಮ್ಯ ಬೇಕು ಎಂದು ರಂಗಕರ್ಮಿ ಕೆ.ವಿ. ಅಕ್ಷರ ಹೇಳಿದರು.
ಅಕಾಲಿಕ ಮರಣ ಹೊಂದಿದ ಗಾಯಕ ದಿ. ಸುಭಾಷ ಹಾರೇಗೊಪ್ಪ ನೆನಪಿನಲ್ಲಿ ಆರಂಭಿಸಿರುವ ಸುಹಾಸಂ ಪ್ರತಿಷ್ಠಾನ ಉದ್ಘಾಟಿಸಿ, ಸುಗಮ ಸಂಗೀತದಲ್ಲಿ ತೊಡಗಿಸಿಕೊಂಡವರು ವಿವಿಧ ಪ್ರಾಕಾರಗಳಲ್ಲಿ ಗುರುತಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಸುಭಾಷ್ ಅವರಿಗೆ ಆಡುವ ಪದ್ಯವನ್ನು ಹಾಡುವ ಪದ್ಯವಾಗಿಸುವ ಕಲೆ ಕರಗತವಾಗಿತ್ತು. ಅವರು ಅಗತ್ಯಕ್ಕೆ ತಕ್ಕಂತೆ ಸುಗಮ ಸಂಗೀತ, ಪಾಶ್ಚಾತ್ಯ, ಶಾಸ್ತ್ರೀಯ ಮತ್ತು ಜನಪದ ಹೀಗೆ ಯಾವುದೇ ಪ್ರಾಕಾರವನ್ನು ಬಳಸಿಕೊಳ್ಳುವ ಕಲೆ ರೂಢಿಸಿಕೊಂಡಿದ್ದರು.
ನಾಟಕ, ಕಿರುತೆರೆ ಧಾರಾವಾಹಿಗಳಿಗೆ ಸಂಗೀತ ಜೋಡಿಸುವಲ್ಲಿ ಅತ್ಯಂತ ಯಶಸ್ಸು ಕಂಡಿದ್ದರು. ಹತ್ತಾರು ಕೆಲಸಗಳನ್ನು ಏಕಕಾಲದಲ್ಲಿ ಸಾಧಿಸುವ ಅನೇಕ ಕಲಾವಿದರಿಗೆ ತಮ್ಮ ಕೇಂದ್ರ ಸ್ಥಾನವನ್ನು ಗುರುತಿಸಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಅಂತಹ ಕೊರತೆ ಸುಭಾಷ ಅವರನ್ನೂ ಕಾಡುತ್ತಿತ್ತು ಎಂದು ಹೇಳಿದರು.
ಎಂಪಿ- 3 ಬಿಡುಗಡೆ: ಸುಭಾಷ ಹಾಡಿದ ಹಾಗೂ ರಾಗಸಂಯೋಜಿಸಿದ ಆಯ್ದ 80 ಹಾಡುಗಳ ಎಂಪಿ-3 ಧ್ವನಿಮುದ್ರಿಕೆಯನ್ನು ಕಿರುತೆರೆ ನಟ-ನಿರ್ದೇಶಕ ರಮೇಶ ಬೇಗಾರ್ ಬಿಡುಗಡೆ ಮಾಡಿದರು. ಪ್ರಾಂಶುಪಾಲ ಪ್ರೊ. ಶಶಿಧರ ಅಧ್ಯಕ್ಷತೆ ವಹಿಸಿದ್ದರು.
ಸುಭಾಷ ಅವರ ತಂದೆ ಎಚ್.ಎಸ್. ಶ್ರೀಪಾದ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸುಭಾಷ ನೆನಪಿನಲ್ಲಿ ಪ್ರಾರಂಭಿಸಲಾಗಿರುವ ಸುಹಾಸಂ ಪ್ರತಿಷ್ಠಾನದಿಂದ ಸಂಗೀತ ಶಾಲೆ, ಸಂಗೀತ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ನಂತರ ರವಿ ಮೂರೂರು ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಮತ್ತು ಪಂ. ನಾಗಭೂಷಣ ಹೆಗಡೆ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement