ಕೆಜೆಪಿ ತಮಿಳರ ಓಲೈಕೆ: ದೂರು
ಶಿವಮೊಗ್ಗ: ಕರ್ನಾಟಕ ಜನತಾ ಪಕ್ಷವು ಚುನಾವಣೆಯಲ್ಲಿ ತಮಿಳರನ್ನು ಓಲೈಸಿಕೊಳ್ಳುವ ಸಲುವಾಗಿ ತಮಿಳು ಭಾಷೆಯಲ್ಲಿ ಕರಪತ್ರ ಸಿದ್ಧಪಡಿಸಿದೆ. ಇದು ಭಾಷಾ ಸಾಮರಸ್ಯ ಕದಡುವ ಪ್ರಯತ್ನವಾಗಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಕನ್ನಡ ಸೈನ್ಯದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಕೆಜೆಪಿಯಿಂದ ಕರಪತ್ರ ಮುದ್ರಣಗೊಂಡಿದ್ದು, ಯಡಿಯೂರಪ್ಪ ಹಾಗೂ ಶಿವಮೊಗ್ಗ ಕೆಜೆಪಿ ಅಭ್ಯರ್ಥಿ ರುದ್ರೇಗೌಡರ ಭಾವಚಿತ್ರವಿರುವ ತಮಿಳು ಭಾಷೆಯಲ್ಲಿರುವ ಕರವನ್ನು ಹಂಚಲಾಗಿದ್ದು, ಇದು ಕನ್ನಡಿಗರ ಮನಸ್ಸು ಹಾಗೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಈ ಅಕ್ಷಮ್ಯ ಕೃತ್ಯದಿಂದ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ. ತಮಿಳುನಾಡಿನಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವಾಗ ರಾಜಕೀಯ ಪಕ್ಷದಿಂದ ತಮಿಳರ ಓಲೈಕೆಗಾಗಿ ತಮಿಳು ಅಕ್ಷರ ಮುದ್ರಿಸಿ ಕರಪತ್ರ ಹೊರಡಿಸಿರುವುದು ಅಕ್ಷಮ್ಯ ಎಂಬುದು ಜಯ ಅವರ ವಾದ.