ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚೀನಾ ಚಟುವಟಿಕೆಗೆ ಕಡಿವಾಣ ಹಾಕಿ

Lingaraj Badiger
Updated On : 30 Apr 2013, 10:52 am

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.29
ಭಾರತ ಗಡಿಯಲ್ಲಿ ಚೀನಾದ ಸೇನೆ ನಡೆಸುತ್ತಿರುವ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಈ ಕೂಡಲೇ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಎಬಿವಿಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಅರ್ಪಿಸಿದರು.
ಚೀನಾ ಸೇನೆ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಸುಮಾರು 19 ಕಿ.ಮೀ.ನಷ್ಟು ಭಾರತದ ಗಡಿಯೊಳಗೆ ಪ್ರವೇಶಿಸಿರುವುದು ಆತಂಕಕಾರಿ ಸಂಗತಿ. ಇದು ಭಾರತದ ಸಾರ್ವಭೌಮತ್ವದ ಮೇಲೆ ನಡೆಸಿರುವ ಹಲ್ಲೆಯಾಗಿದೆ ಎಂದು ಸಂಘಟನೆ ಪ್ರಮುಖರು ಆರೋಪಿಸಿದರು.
ಕೇಂದ್ರ ಸರ್ಕಾರ ದೇಶದ ಸಾರ್ವಭೌಮತೆ, ಗಡಿ ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಗರಣ, ಭ್ರಷ್ಟಾಚಾರ, ದುರಾಡಳಿತದಲ್ಲಿ ಮುಳುಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಉದಾಸೀನದಿಂದಾಗಿ ಸಂಘಟಿತ ರೂಪದಲ್ಲಿ ಅತ್ಯಂತ ಬಲಿಷ್ಠವಾಗಿರುವ ಸೇನೆಯ ಮನೋಬಲ ಕುಗ್ಗಿಸುವ ಕೆಲಸ ನಡೆಸುತ್ತಿದೆ. ಚೀನಾದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ನಿಲುವು ತಳೆಯಬೇಕು. ಭಾರತದ ಗಡಿಯಂಚಿನಿಂದ ಹೊರ ಕಳುಹಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಠೋರ ಪ್ರತಿಕ್ರಿಯೆ ಅಗತ್ಯ: ಚೀನಾದ ಈ ದುಸ್ಸಾಹಸವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರಾಜತಾಂತ್ರಿಕ, ವ್ಯಾವಹಾರಿಕ ಮತ್ತು ಸಮರ ನೀತಿ ಸೇರಿದಂತೆ ಲಭ್ಯವಿರುವ ಎಲ್ಲ ಸ್ತರಗಳ ಮೂಲಕ ಕಠೋರ ಪ್ರತಿಕ್ರಿಯೆ ವ್ಯಕ್ತಪಡಿಸಬೇಕು. ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿಯ ಪ್ರಮುಖರಾದ ಪ್ರಸನ್ನಕುಮಾರ್, ಸುಜಿತ್, ಅಖಿಲ್, ಚರಣ್, ಸುಂದರೇಶ್, ಮಂಜುನಾಥ್, ಸಂಜಯ್, ಸಂದೀಪ್ ಬಾಳಪ್ಪ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement