ಟ್ಯಾಂಕರ್ ಮೂಲಕ ನೀರು ಸರಬರಾಜು: ನೋಟಿಸ್
ಸಾಗರ: ನಗರದಲ್ಲಿ ಕುಡಿಯುವ ನೀರಿನ ಕೊರತೆ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುತ್ತಿರುವ ಸಂದರ್ಭದಲ್ಲಿ ನಗರಸಭೆ ಸದಸ್ಯರು ನಿಂತು ನೀರು ಹಂಚಿಕೆ ಮಾಡಿದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ಗಣಾಧೀಶ್ವರ್, ರವಿ ಜಂಬಗಾರು ಹಾಗೂ ಶ್ರೀನಾಥ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯರು ನೀರು ಸರಬರಾಜು ಮಾಡುತ್ತಿರುವುದು ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗಿದೆ ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ.
ಪ್ರತಿಕ್ರಿಯೆ: ಇದಕ್ಕೆ ಸ್ಪಷ್ಟನೆ ನೀಡಿರುವ ನಗರಸಭೆ ಸದಸ್ಯರಾದ ಗಣಾಧೀಶ್ವರ್, ರವಿ ಜಂಬಗಾರು ಹಾಗೂ ಶ್ರೀನಾಥ್ ನಾವು ನಗರಸಭೆಗೆ ನೂತನವಾಗಿ ಆಯ್ಕೆಯಾದ ಸದಸ್ಯರಾಗಿದ್ದು, ಜನ ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ. ನಮ್ಮ ಮನೆಗೆ ಪ್ರತಿನಿತ್ಯ ಬಂದು ನೀರು ಸರಬರಾಜು ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೌರಾಯುಕ್ತರಿಗೆ ಜನರ ಅಹವಾಲನ್ನು ಲಿಖಿತವಾಗಿ ತಿಳಿಸಿದ್ದೇವೆ. ನಾವು ನೀತಿಸಂಹಿತೆ ಉಲ್ಲಂಘಿಸಿಲ್ಲ. ನಮಗೆ ಕಾರಣ ಕೇಳಿ ನೋಟಿಸ್ ನೀಡಿರುವುದು ತಪ್ಪು ತಿಳುವಳಿಕೆಯಿಂದ ಕೂಡಿರುತ್ತದೆ ಎಂದು ತಿಳಿಸಿದ್ದಾರೆ.
ಬೈಕ್‌ನಿಂದ ಬಿದ್ದು ವ್ಯಕ್ತಿ ಸಾವು
ಸಾಗರ: ತಾಲೂಕಿನ ಲಿಂಗದಹಳ್ಳಿ ಸಮೀಪದ ಕೆರೋಡಿ ಬಳಿ ಬೈಕ್ ಜಾರಿ ಬಿದ್ದು ಕೃಷ್ಣಪ್ಪ (50) ಎಂಬುವವರು ಸ್ಥಳದಲ್ಲಿಯೆ ಮೃತಪಟ್ಟ ಘಟನೆ ನಡೆದಿದೆ. ಸೂರನಗದ್ದೆಯಿಂದ ಜಂಬಾನಿಗೆ ಬೈಕಿನಲ್ಲಿ ಹೊರಟಿದ್ದ ಕೃಷ್ಣಪ್ಪ ಕೆರೋಡಿ ತಿರುವಿನಲ್ಲಿ ಆಕಸ್ಮಿಕವಾಗಿ ಬಿದ್ದಿದ್ದರಿಂದ ತಲೆಗೆ ಗಂಭೀರ ಹೊಡೆತ ಬಿದ್ದು ಸ್ಥಳದಲ್ಲಿಯೆ ಅಸು ನೀಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಂತ್ ಗೈರು
ಶೃಂಗೇರಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್‌ಕು ಮಾರ್ ಸೋಮವಾರ ಪಟ್ಟಣಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ಪ್ರಚಾರ ಕಾರ್ಯಕ್ರಮವಿತ್ತು. ಬೆಳಿಗ್ಗೆಯಿಂದಲೇ ಕಾರ್ಯಕರ್ತರು ಜಮಾಯಿಸತೊಡಗಿದ್ದರು. ಪೊಲೀಸ್ ಭದ್ರತೆಯನ್ನು ಆಯೋಜಿಸಲಾಗಿತ್ತು. ಆದರೆ ಕೊನೇಕ್ಷಣದಲ್ಲಿ ಹವಾಮಾನ ವೈಪರಿತ್ಯದ ಕಾರಣ ಪ್ರವಾಸ ದಿಢೀರ್ ರದ್ದಾಯಿತು ಎಂದು ತಿಳಿಸಿದ್ದಾರೆ. ಅನಂತ್‌ಕುಮಾರ್ ಗೈರು ಹಾಜರಿಯಲ್ಲಿ ಕಾರ್ಯಕ್ರಮ ನಡೆಯಿತು.