ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಶಿವಮೊಗ್ಗ: ನೇಣು ಬಿಗಿದು ಪತ್ರಕರ್ತ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕುಂಸಿ ಗ್ರಾಮದಲ್ಲಿ ನಡೆದಿದೆ.
ಚಂದ್ರಪ್ಪ ಎಂಬುವರ ಪುತ್ರ ಜಿತೇಂದ್ರ (23) ಆತ್ಮಹತ್ಯೆ ಮಾಡಿಕೊಂಡವರು. ಈತ ಶಿವಮೊಗ್ಗ ನಗರದ ಸಂಜೆ ದಿನಪತ್ರಿಕೆಯೊಂದರಲ್ಲಿ ವರದಿಗಾರರಾಗಿದ್ದರು.
ಇವರು ತಮ್ಮ ಮನೆಯ ಸ್ನಾನದ ಕೋಣೆಯಲ್ಲಿ ತಡರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕನ ಬರ್ಬರ ಹತ್ಯೆ
ಯುವಕನೋರ್ವನ ತಲೆಯ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಅಬ್ಬಲಗೆರೆ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಗೀಡಾದ ಯುವಕನಿಗೆ ಸರಿಸುಮಾರು ಸರಿಸುಮಾರು 25ರಿಂದ 28 ವರ್ಷವಿದ್ದು ಆತನ ಹೆಸರು, ವಿಳಾಸ ಸೇರಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಲಗೈ ಮೇಲೆ ಜ್ಯೋತಿ, ರಾಜು ಮತ್ತು ವಸಂತ ಎಂಬ ಹೆಸರಿನ ಹಚ್ಚೆ ಗುರುತು ಇದೆ.
ಅಬ್ಬಲಗೆರೆ ಗ್ರಾಮದ ಸರ್ವೆ ನಂ.23ರರಲ್ಲಿರುವ ಉಮೇಶ್ ಎಂಬುವರ ಹೊಲದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ರಾತ್ರಿ ವೇಳೆ ದುಷ್ಕರ್ಮಿಗಳು ಬೇರೆಡೆ ಯುವಕನ ಹತ್ಯೆ ನಡೆಸಿ ನಂತರ ಶವವನ್ನು ಹೊಲದಲ್ಲಿ ತಂದು ಎಸೆದು ಹೋಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
1.55 ಲಕ್ಷ ವಶ
ಸೊರಬ: ಆನವಟ್ಟಿ ರಸ್ತೆಯ ಸಮನವಳ್ಳಿ ಗ್ರಾಮದ ಬಳಿ ಸೋಮವಾರ ಸಂಜೆ ಕೆಜೆಪಿ ಅಧ್ಯಕ್ಷ ಎಂ.ಆರ್. ಪಾಟೀಲ್ ಹಾಗೂ ಸಂಗಡಿಗರ ಬಳಿ ಇದ್ದ ಹಣ ಮತ್ತು ಚುನಾವಣಾ ಉಪಕರಣಗಳ ಮಾದರಿಗಳನ್ನು ಚುನಾವಣ ಜಾಗೃತ ಪಡೆ ವಶಪಡಿಸಿಕೊಂಡಿದ್ದಾರೆ.
ಇಂಡಿಕಾ ಕಾರಿನಲ್ಲಿ ತೆರಳುತ್ತಿದ್ದ ಕೆಜೆಪಿ ತಾಲೂಕು ಅಧ್ಯಕ್ಷ ಎಂ.ಆರ್.ಪಾಟೀಲ್, ಅವರೊಂದಿಗಿದ್ದ ವಕೀಲ ಶಿವಪ್ಪ, ಚೆನ್ನಪ್ಪ, ವೀರಪ್ಪಗೌಡ ಹಾಗೂ ಕಾರು ಚಾಲಕ ಉಮೇಶ್ ಅವರೊಂದಿಗೆ 1.55 ಲಕ್ಷ ಹಾಗೂ 4 ಮಾದರಿ ಮತಯಂತ್ರ, ಬ್ಯಾಲೇಟ್‌ನ ಮಾದರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವ್ಯಕ್ತಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಹಣ, ಉಪಕರಣಗಳೊಂದಿಗೆ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.