ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಈಡಿಗ ಸಮಾಜದ ಕಡಗಣನೆ: ಬಿಜೆಪಿಗೆ ಗುಡ್‌ಬೈ

Vishwanath S
Updated On : 1 May 2013, 12:31 pm

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.30
ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಸೊರಬ ಬಿಜೆಪಿ ಮುಖಂಡ ಹುಲ್ತಿಕೊಪ್ಪ ಶ್ರೀಧರ್ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ ಶ್ರೀಧರ್, ಬುಧವಾರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸೊರಬದಲ್ಲಿ ಕಾಂಗ್ರೆಸ್ ಸೇರುತ್ತಿರುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಹೊಂದಿರುವ ಈಡಿಗ ಸಮಾಜಕ್ಕೆ ಬಿಜೆಪಿ ಚುನಾವಣೆಯಲ್ಲಿ ಪ್ರಾಮುಖ್ಯತೆ ನೀಡದೇ ಇರುವುದೇ ಆ ಪಕ್ಷ ತೊರೆಯಲು ಕಾರಣ ಎಂದು ಹೇಳಿದ ಅವರು, ಈಡಿಗ ಸಮಾಜಕ್ಕೆ ಬಿಜೆಪಿಯಿಂದಾದ ನಿರ್ಲಕ್ಷ್ಯದ ಬಗ್ಗೆ ಆ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ ಅವರಿಗೆ ಪತ್ರ ಬರೆದರೂ ಅವರಿಂದ ಸೌಜನ್ಯಕ್ಕೂ ಯಾವುದೇ ಸಕಾರಾತ್ಮಕ ಉತ್ತರ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗೆಲುವಿಗೆ ಶ್ರಮಿಸಿದೆ: 2008ರಲ್ಲಿ ತಮಗೆ ಟಿಕೆಟ್ ದೊರೆಯುವ ವಿಶ್ವಾಸವಿತ್ತು, ಆದರೆ ಹೊರಗಿನ ಕ್ಷೇತ್ರದವರಾದ ಹಾಲಪ್ಪನವರನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ನಂತರ ನಿಗಮ ಮಂಡಳಿ ಸೇರಿದಂತೆ ವಿವಿಧ ಜವಾಬ್ದಾರಿ ನೀಡುವ ಮಾತನ್ನಾಡಿದ ಮುಖಂಡರು ನಂತರ ತಣ್ಣಗೆ ಕುಳಿತರು. ಆದರೆ, ಕ್ಷೇತ್ರಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡಿದೆ. ಸೊರಬದಲ್ಲಿ ಹಾಲಪ್ಪನವರ ಗೆಲುವಿಗೆ ಶ್ರಮಿಸಿದೆ, ನಂತರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿನಲ್ಲೂ ಶ್ರಮಿಸಿದೆ. ಆದರೆ, ಪಕ್ಷದ ಮುಖಂಡರು ಮಾತ್ರ ತಮ್ಮನ್ನು ಗುರುತಿಸಲೇ ಇಲ್ಲ. ಈ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಕೊನೆ ಗಳಿಗೆಯಲ್ಲಿ ಕ್ಷೇತ್ರದ ಜನರಿಗೆ ಪರಿಚಯವಿಲ್ಲದ, ಬಿಜೆಪಿ ಕಾರ್ಯಕರ್ತರಲ್ಲದವರನ್ನು ಅಭ್ಯರ್ಥಿಯಾಗಿ ಹೂಡಿದರು. ಈ ಬೆಳವಣಿಗೆಯಿಂದ ಬೇಸರವಾಯಿತು ಎಂದು ಹೇಳಿದರು.
ಕಡೆಗಣಿಸಲಾಗಿದೆ: ತಮಗೆ ಟಿಕೆಟ್ ನೀಡದೇ ಇದ್ದರೂ ಪರವಾಗಿರಲಿಲ್ಲ, ಈಡಿಗ ಸಮಾಜಕ್ಕೆ ಸೇರಿದ ಯಾವುದೇ ಮುಖಂಡರನ್ನು ಗುರುತಿಸಿ ಬಿಜೆಪಿಯಿಂದ ಟಿಕೆಟ್ ನೀಡಬಹುದಿತ್ತು. ಈಡಿಗ ಸಮುದಾಯದವರು ಹೆಚ್ಚಾಗಿರುವ ಸೊರಬ, ಸಾಗರ ಕ್ಷೇತ್ರದಲ್ಲಿ ಟಿಕೆಟ್ ನೀಡಬಹುದಿತ್ತು. ಒಟ್ಟಾರೆ ಬಿಜೆಪಿಯಿಂದ ಈಡಿಗ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾತಿನಿದ್ಯ ಸಿಗಲಿಲ್ಲ: ಕಳೆದ ಚುನಾವಣೆಯಲ್ಲಿ ಈಡಿಗ ಸಮುದಾಯಕ್ಕೆ ಸೇರಿದ ಹಾಲಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಶಾಸಕರಾದರು. ವಿವಿಧ ಕಾರಣದಿಂದ ಹಾಲಪ್ಪವರಿಗೆ ಮಂತ್ರಿಗಿರಿ ತಪ್ಪಿತು. ಆದರೆ, ಬೇಳೂರು ಗೋಪಾಲಕೃಷ್ಣ ಅವರಿಗೆ ಮಂತ್ರಿಗಿರಿ ನೀಡಿ, ಕನಿಷ್ಠ ನಿಗಮ ಮಂಡಳಿಯನ್ನಾದರೂ ಕೊಡಿ ಎಂದು ನಮ್ಮ ಸಮಾಜದಿಂದ ಕೇಳಿದರೂ ಸ್ಪಂದನೆ ಸಿಗಲಿಲ್ಲ. ಇದೀಗ ಇಡೀ ಸಮಾಜಕ್ಕೆ ಯಾವುದೇ ಪ್ರಾತಿನಿದ್ಯ ಸಿಗದೇ ಇರುವುದರಿಂದ ಬೇಸತ್ತ ಕಾರ್ಯಕರ್ತರು ಬಿಜೆಪಿ ತೊರೆಯುವಂತೆ ಒತ್ತಡ ಹೇರಿದರು. ಹೀಗಾಗಿ ಕಾಂಗ್ರೆಸ್ ಸೇರುತ್ತಿರುವುದಾಗಿ ತಿಳಿಸಿದರು.
3 ಲಕ್ಷ ಮತದಾರರಿದ್ದಾರೆ: ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಇಲ್ಲ, ತತ್ವ ಸಿದ್ಧಾಂತಕ್ಕೆ ಬೆಲೆ ಉಳಿದಿಲ್ಲ. ಪ್ರಾಮಾಣಿಕತೆಯನ್ನು ತಿಳಿದುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಭಾಗದಲ್ಲಿ ಪಕ್ಷ ಕಟ್ಟಿದ ತಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿದರು, ನಮ್ಮ ಸಮಾಜವನ್ನು ಟಾರ್ಗೆಟ್ ಮಾಡಲಾಯಿತು ಎಂದು ಹೇಳಿದರು. ಜಿಲ್ಲೆಯಲ್ಲಿ ಈಡಿಗ ಸಮುದಾಯದ 10 ಲಕ್ಷ ಜನರಿದ್ದಾರೆ. ಸುಮಾರು 3 ಲಕ್ಷ ಮತದಾರರಿದ್ದಾರೆ.
ಇಂತಹ ಸಂದರ್ಭದಲ್ಲಿ ಕಾರ್ಯಕರ್ತರ ಹಿತವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಮಾಜಕ್ಕೆ ಪ್ರಾತಿನಿದ್ಯ ಕೊಡಿಸುವ ಜವಾಬ್ದಾರಿ ಇರುವುದರಿಂದ ಮುಖಂಡರೆಲ್ಲಾ ಸೇರಿ ಚರ್ಚಿಸಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಸೇರಲು ತೀರ್ಮಾನಿಸಲಾಯಿತು. ಬುಧವಾರ ಸೊರಬದಲ್ಲಿ ನಡೆವ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಜೊತೆ ಸೇರುತ್ತಿದ್ದೇವೆಂದರು. ಸುದ್ದಿಗೋಷ್ಠಿಯಲ್ಲಿ ಮಹೇಶ್, ದಿನೇಶ್, ಮಲ್ಲಿಕಾರ್ಜುನ, ಚಂದ್ರಪ್ಪ ಮತ್ತಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement