ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಈಶ್ವರಪ್ಪ ಕೋಟ್ಯಂತರ ರು. ಅವ್ಯವಹಾರ

Vishwanath S
Updated On : 1 May 2013, 12:49 pm

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.30
ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಾವುಗಳಿಸಿದ ಭ್ರಷ್ಟಾಚಾರದ ಕಪ್ಪುಹಣವನ್ನು ಸಕ್ರಮಗೊಳಿಸಲು ಭರಣಿ ಪವರ್ ಪ್ರೈವೆಟ್ ಲಿಮಿಟೆಡ್ ಎಂಬ ಬೇನಾಮಿ ಕಂಪನಿಯೊಂದನ್ನು ಹುಟ್ಟುಹಾಕಿ ಕೋಟ್ಯಂತರ ರುಪಾಯಿ ಅವ್ಯವಹಾರವೆಸಗಿದ್ದಾರೆ ಎಂದು ಕೆಜೆಪಿ ಆರೋಪಿಸಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಪಿ. ಪುರುಷೋತ್ತಮ್, 2010ರಲ್ಲಿ ನೋಂದಾಯಿಸಲ್ಪಟ್ಟ ಈ ಕಂಪನಿ ವಿದ್ಯುತ್ ಉತ್ಪಾದಿಸುವುದಾಗಿ ಹೇಳಿದೆ. ದೇಶದಲ್ಲೆಲ್ಲೂ ಈ ರೀತಿಯ ಯಾವುದೇ ಚಟುವಟಿಕೆ ನಡೆಸದೆಯೂ ಲಾಭದಾಯಕ ಸಂಸ್ಥೆಯಾಗಿಸಿ, 10 ಮುಖ ಬೆಲೆಯ ಶೇರನ್ನು 190ಕ್ಕೆ ಮಾರಾಟ ಮಾಡಿದಂತೆ ತೋರಿಸಿ ಅಕ್ರಮ ಹಣವನ್ನು ಸಕ್ರಮ ಮಾಡಲು ಯತ್ನಿಸಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ್ 4.57 ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿದರು.
ಕಾಂತೇಶ್ ಅಧ್ಯಕ್ಷ: ಶಿವಮೊಗ್ಗದ ಅಶೋಕ ರಸ್ತೆಯಲ್ಲಿರುವ ಈಶ್ವರಪ್ಪ ಅವರ ಹಳೆಮನೆ ವಿಳಾಸವನ್ನೇ ಭರಣಿ ಪವರ್ ಕಂಪನಿ ವಿಳಾಸವಾಗಿ ನೀಡಲಾಗಿದೆ. ರಿಜಿಸ್ಟ್ರಾರ್ ಆಫ್ ಕಂಪನೀಸ್ನಲ್ಲಿ ಈ ಕಂಪನಿ 2010ರಲ್ಲಿ ಬೆಂಗಳೂರಿನಲ್ಲಿ ನೋಂದಣಿಯಾಗಿದೆ. ಈ ಸಂಸ್ಥೆಗೆ ಕೆ.ಇ. ಕಾಂತೇಶ್ ಅಧ್ಯಕ್ಷರಾಗಿದ್ದು, ಕಾಂತೇಶ್ ಪತ್ನಿ ಶಾಲಿನಿ ಹಾಗೂ ಕೊಲ್ಕತ್ತ ಮೂಲದ 9 ಕಂಪನಿಗಳು ಶೇರುದಾರರಾಗಿದ್ದಾರೆ. ಈ ಭರಣಿ ಕಂಪನಿ 15 ಲಕ್ಷ ಈಕ್ವಿಟಿ ಷೇರುಗಳನ್ನು 10 ಮುಖಬೆಲೆಗೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿಕೊಂಡಿತ್ತು. ಆದರೆ, 2,76,250 ಲಕ್ಷ ಈಕ್ವಿಟಿ ಶೇರುಗಳನ್ನು ಕೆ.ಇ. ಕಾಂತೇಶ್ ಹಾಗೂ ಪತ್ನಿ ಶಾಲಿನಿಯವರು ತಲಾ 10 ಮುಖಬೆಲೆಯ 25 ಸಾವಿರ ಶೇರು ಹೊಂದಿದ್ದರೆ, ಉಳಿದ 9 ಕಂಪನಿಗಳು 2,26,250 ಈಕ್ವಿಟಿ ಷೇರುಗಳನ್ನು 4,29,87,500 ನೀಡಿ ಖರೀದಿಸಿವೆ ಎಂದರು.
ಅನುಮಾನ: ಈವರೆಗೆ ಈ ಕಂಪನಿ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದನೆ ಮಾಡದೇ ಲಾಭ ಗಳಿಸಿರುವುದು ಹೇಗೆ ಎಂದು ಪ್ರಶ್ನಿಸಿದ ಪುರುಷೋತ್ತಮ್, ದೇಶದ ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಯಾವುದೇ ಹೆಸರಿಲ್ಲದ ಭರಣಿ ಪವರ್ ಕಂಪನಿ ಶೇರುಗಳನ್ನು ಕೊಲ್ಕತ್ತ ಮೂಲದ 9 ಕಂಪನಿಗಳು ಖರೀದಿಸಿರುವುದು ಅನೇಕ ಅನುಮಾನ ಮೂಡಿಸುತ್ತಿದೆ. ಅಲ್ಲದೇ ಕಾಂತೇಶ್, ಶಾಲಿನಿ ರಾಘವೇಂದ್ರ (ದಾಖಲಾತಿಗಳಲ್ಲಿ ಶಾಲಿನಿ ಅವರ ಹೆಸರಿನ ಜತೆ ಪತಿಯ ಬದಲು ತಂದೆಯ ಹೆಸರು ನೀಡಲಾಗಿದೆ) ಸೇರಿದಂತೆ 9 ಕಂಪನಿಗಳಿಂದ ಶೇರು ಹಾಗೂ ಶೇರು ಪ್ರೀಮಿಯಂ ರೂಪದಲ್ಲಿ ಬಂದ 4,75,50,000 ಕೋಟಿ ಬಂಡವಾಳವನ್ನು ವಿದ್ಯುತ್ ಉತ್ಪಾದನೆಗೆ ಬಳಸಿದ್ದರೆ ಕಂಪನಿ ಮೂಲ ಉದ್ದೇಶ ಈಡೇರಿದಂತಾಗುತ್ತಿತ್ತು ಎಂದು ತಿಳಿಸಿದರು.
ತೆರಿಗೆ ವಂಚನೆ: ಇದರ ಬದಲಾಗಿ 4.75.50.000 ಕೋಟಿಯಲ್ಲಿ ಕಾಂತೇಶ್ಗೆ 3.61 ಕೋಟಿ, ಈಶ್ವರಪ್ಪ ಪತ್ನಿ ಜಯಲಕ್ಷ್ಮೀ ಅವರಿಗೆ 17 ಲಕ್ಷ ಮತ್ತು ಪಲ್ಲಕ್ಕಿ ಡೆವಲಪರ್ಸ್ಗೆ 74 ಲಕ್ಷ ಸಾಲ ನೀಡಲಾಗಿದೆ. ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಭೂಮಿ ಮತ್ತು ಯಂತ್ರ ಖರೀದಿ, ಕಟ್ಟಡ ನಿರ್ಮಾಣ ಹೀಗೆ ಯಾವುದೇ ಪ್ರಕ್ರಿಯೆ ನಡೆಯುವ ಮುನ್ನವೇ ಕೇವಲ ಶೇ.9.45 ರಷ್ಟು ಶೇರು ಹೊಂದಿರುವ ಕಾಂತೇಶ್ಗೆ ಶೇಕಡಾ 91.90ರಷ್ಟು ಸಾಲ ನೀಡಿರುವುದರ ಹಿಂದೆ ತೆರಿಗೆ ವಂಚನೆ ಹಾಗೂ ಅಕ್ರಮ ಹಣದ ಸಕ್ರಮೀಕರಣ ನಡೆದಿದೆ ಎಂದು ಆಪಾದಿಸಿದರು.
ಆದ್ದರಿಂದ 2011-12 ರಲ್ಲಿ ಯಾವುದೇ ಸ್ಥಿರ ಹಾಗೂ ಚರಾಸ್ತಿ ಹೊಂದಿರದ ಭರಣಿ ಪವರ್ ಕಂಪನಿ, ಕಂಪನೀಸ್ ಆಕ್ಟ್
ಸೆಕ್ಷನ್ 13(ಡಿ)ಪ್ರಕಾರ ಕಂಪನಿ ರಚನೆ ಹಾಗೂ ಮೂಲ ಉದ್ದೇಶಕ್ಕೆ ಹಣ ವಿನಿಯೋಗ ಮಾಡದೇ, ನಿಯಮಗಳನ್ನು ಉಲ್ಲಂಘಿಸಿ ಅವ್ಯವಹಾರ ನಡೆಸಿದ್ದಾರೆ ಎಂದು ತಿಳಿಸಿದರು.
ಈ ಸಂಬಂಧ ಚುನಾವಣಾ ಆಯೋಗ, ಆದಾಯ ಇಲಾಖೆ ಹಾಗೂ ರಿಜಿಸ್ಟ್ರಾರ್ ಆಫ್ ಕಂಪನೀಸ್ಗೆ ದೂರು ನೀಡಲಾಗುವುದು ಎಂದರಲ್ಲದೇ, ಬಿಜೆಪಿಯಿಂದ ಭ್ರಷ್ಟರೆಲ್ಲಾ ಹೊರಹೋಗಿದ್ದಾರೆ ಎಂದು ಪಕ್ಷದ ರಾಜ್ಯ, ರಾಷ್ಟ್ರೀಯ ಮುಖಂಡರು ಹೇಳುತ್ತಿದ್ದಾರೆ. ಆದರೆ, ಡಿಸಿಎಂ ಈಶ್ವರಪ್ಪ ತಮ್ಮ ಮಗನ ಮೂಲಕ ನಡೆಸಿರುವ ಕೋಟ್ಯಂತರ ರುಪಾಯಿ ಅವ್ಯವಹಾರದ ಬಗ್ಗೆ ಬಹಿರಂಗವಾಗಿ ಮಾಹಿತಿ ನೀಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಬಸವಣ್ಯಪ್ಪ, ಪಕ್ಷದ ಮುಖಂಡ ಮಲ್ಲಿಕಾರ್ಜುನ, ಶಿವಕುಮಾರ್, ಸದಾಶಿವಪ್ಪಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement