ಕೆಜೆಪಿ, ಜೆಡಿಎಸ್ ಅಪ್ಪ ಮಕ್ಕಳ ಪಕ್ಷಗಳು
ತೀರ್ಥಹಳ್ಳಿ: ಕೆಜೆಪಿ ಮತ್ತು ಜೆಡಿಎಸ್ ಎರಡೂ ಅಪ್ಪ ಮಕ್ಕಳ ಪಕ್ಷ. ಹಾಗಾಗಿ ಮುಂದೆ ಅವರಿಗೆ ಯಾವತ್ತೂ ಹೊಂದಾಣಿಕೆ ಆಗೋದಿಲ್ಲ. ಸಿ.ಎಂ. ಇಬ್ರಾಹಿಂ ರೋಲೆಕ್ಸ್ ವಾಚ್, ಪದ್ಮಕ್ಕ ಪ್ರಕರಣಗಳ ರಾಜ ಎಂದು ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಬಿಜೆಪಿ ಈಗಲೂ ಪರಿಶುದ್ಧ ಪಕ್ಷವಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ಮತದಾರರರು ಚುನಾಯಿಸಿದರೆ ಮುಂದಿನ 5 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಹೇಗಾಗುತ್ತದೆ ಕಾದು ನೋಡಿ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಮಾತನಾಡಿ, ಸಮಾಜ ಸೇವಾ ಕಾರ್ಯಕ್ಕಾಗಿಯೇ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದು ಎಂದು ಹೇಳಿದರು. ಶೋಷಿತರ ಕಷ್ಟಕಾರ್ಪಣ್ಯಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ಅದು ಆತ್ಮಬಲ ತಂದುಕೊಟ್ಟಿದೆ ಎಂದರು.
ಮುಖ್ಯಮಂತ್ರಿ ಚಂದ್ರು ಪ್ರಚಾರ
ಶಿವಮೊಗ್ಗ: ನಗರದಲ್ಲಿ ಮುಖ್ಯಮಂತ್ರಿ ಚಂದ್ರು ದಂಪತಿ ಮಂಗಳವಾರ ಮತಯಾಚನೆ ಮಾಡಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಚಿತ್ರನಟರಾದ ಮುಖ್ಯಮಂತ್ರಿ ಚಂದ್ರು ಅವರು ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಾ ಮತಯಾಚನೆ ಮಾಡಿದರು. ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಪಾದಯಾತ್ರೆಯ ಮುಖೇನ ಪ್ರಾರಂಭಿಸಿ ನಗರದ ವಿವಿಧ ಭಾಗಗಳಲ್ಲಿ ಪ್ರಚಾರ ಕಾರ್ಯ ನಡೆಸಿದರು. ಅವರೊಂದಿಗೆ ಪಕ್ಷದ ಪ್ರಮುಖರಾದ ವಿನೋದ್ ಕುಮಾರ್, ರಾಜು, ಜಗದೀಶ್, ನಂಜುಂಡ, ಶ್ರೀನಿವಾಸ ಇತರರು ಭಾಗವಹಿಸಿದ್ದರು.
ನಾಳೆ ಮತದಾನ ಜಾಗೃತಿ ಜಾಥಾ
ಶಿವಮೊಗ್ಗ: ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕಗಳ ಒಕ್ಕೂಟ ಹಾಗೂ ಅಣ್ಣಾ ಹಜಾರೆ ಹೋರಾಟ ಸಮಿತಿ ಆಶ್ರಯದಲ್ಲಿ ಮೇ2ರಂದು ಮತದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ವಿ. ವಸಂತಕುಮಾರ್ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು, ಮೇ 5ರಂದು ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಏರ್ಪಡಿಸಿದ್ದು, ಮೇ 2ರಂದು ಬೆಳಿಗ್ಗೆ 10.30ಕ್ಕೆ ಗಾಂಧಿಪಾರ್ಕ್ನಿಂದ ಬಿ.ಎಚ್. ರಸ್ತೆ, ನೆಹರು ರಸ್ತೆ, ದುರ್ಗಿಗುಡಿ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಯಲಿದೆ ಎಂದರು. ಜಾಥದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಳ್ಳಲಿದ್ದು, ಮುಂದಿನ 5 ವರ್ಷ ರಾಜ್ಯದ ಭವಿಷ್ಯವನ್ನು ಸುಗಮವಾಗಿ ನಡೆಸುವ ಸೂಕ್ತ, ಅರ್ಹ ಅಭ್ಯರ್ಥಿಗಳನ್ನು ಯಾವುದೇ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಗಳ ಪ್ರಮುಖ ಡಾ. ಸತೀಶ್ ಕುಮಾರ್ ಶೆಟ್ಟಿ, ಡಾ. ಚಿಕ್ಕಸ್ವಾಮಿ, ಅಶೋಕ್ ಯಾದವ್, ರಮೇಶ್, ಉದಯ ಇದ್ದರು.