ಬಿಜೆಪಿಯ ಹೈಟೆಕ್ ಪ್ರಚಾರಕ್ಕೆ ಚಾಲನೆ
ಸಾಗರ: ಬಿಜೆಪಿಯ ಹೈಟೆಕ್ ಪ್ರಚಾರದ ವಾಹನಕ್ಕೆ ಪಕ್ಷದ ಅಭ್ಯರ್ಥಿ ಶರಾವತಿ ಸಿ. ರಾವ್ ಸಾಗರ ಹೋಟೆಲ್ ವೃತ್ತದಲ್ಲಿ ಮಂಗಳವಾರ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪಕ್ಷದ ಕಾರ್ಯಕ್ರಮ ಹಾಗೂ ಸರ್ಕಾರ ಕಳೆದ 5 ವರ್ಷಗಳ ಅವಧಿಯಲ್ಲಿ ಕೈಗೊಂಡ ಯೋಜನೆ ಕುರಿತು ಜನರಿಗೆ ಮಾಹಿತಿ ತಲುಪಿಸಲು ಬಿಜೆಪಿ ಇಂತಹ ಪ್ರಯತ್ನ ಮಾಡಿದೆ. ಐದು ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳು, ಎಲ್ಲಾ ವರ್ಗದ ಹಿತ ಕಾಯುವಲ್ಲಿ ಜಾರಿಗೆ ತಂದ ಯೋಜನೆಗಳು ಪಕ್ಷವು ಬಹುಮತ ಪಡೆಯಲು ಸಹಕಾರಿಯಾಗಲಿದೆ ಎಂದರು.
ಬಿಜೆಪಿ ತಾ. ಅಧ್ಯಕ್ಷ ಯು.ಎಚ್. ರಾಮಪ್ಪ, ಪ್ರಮುಖರಾದ ಸಂತೋಷ್ ಆರ್. ಶೇಟ್, ಚೇತನರಾಜ್, ಕೃಷ್ಣಮೂರ್ತಿ ಭಂಡಾರಿ, ಆನಂದ್, ಹರ್ಷ, ದಿನಕರ್, ರಾಘವೇಂದ್ರ ಹಾಜರಿದ್ದರು.