ಸಣ್ಣಪುಟ್ಟ ಸಮಸ್ಯೆಇವೆ: ಬೇಳೂರು
ಸಾಗರ: ಎಲ್ಲಾ ಪಕ್ಷಗಳಲ್ಲಿ ಇದ್ದಂತೆ ಸ್ಥಳೀಯ ಜೆಡಿ(ಎಸ್) ಘಟಕದಲ್ಲಿಯೂ ಸಣ್ಣಪುಟ್ಟ ಗೊಂದಲಗಳಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಲಾಗುವುದು ಎಂದು ಪಕ್ಷದ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಹೇಳಿದರು. ತಾಲೂಕಿನ ಹುಲ್ಲತ್ತಿ, ಶಿರವಾಳ, ನೇರಲಗಿ, ಹಳ್ಳಿಬೈಲು, ಕೆಳದಿ, ಕೆಳದಿಪುರ, ಮಾಸೂರು, ಅದರಂತೆ ಭಾಗಗಳಲ್ಲಿ ಮಂಗಳವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ, ಕಾಂಗ್ರೆಸ್ ಸೋಲಿನ ಭೀತಿಯಲ್ಲಿದೆ. ತಮ್ಮ ಅವಧಿಯಲ್ಲಿ ಅವಕಾಶವಿದ್ದರೂ ಬಗರ್ ಹುಕುಂ ಹಕ್ಕುಪತ್ರ ನೀಡದ ಕಾಗೋಡು ತಿಮ್ಮಪ್ಪ ಈಗ ಅದನ್ನೇ ಚುನಾವಣಾ ಅಸ್ತ್ರವನ್ನಾಗಿಸಿಕೊಂಡು ಮತದಾರರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಭವಿಷ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ಸಿನಲ್ಲಿ ಕಿತ್ತಾಟ ಪ್ರಾರಂಭವಾಗಿದೆ. ಸಮೀಕ್ಷೆ ಪ್ರಕಾರ ಸರ್ಕಾರ ರಚನೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಮಹಿಳೆಯರ, ರೈತರ, ಬಡವರ ಹಾಗೂ ಎಲ್ಲಾ ವರ್ಗದ ಹಿತಕಾಯುವಲ್ಲಿ ಅನೇಕ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಅದನ್ನು ಪ್ರತಿಶತ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು. ಪಕ್ಷದ ತಾ. ಅಧ್ಯಕ್ಷ ಕೆ. ಅರುಣಪ್ರಸಾದ್, ಮುಖಂಡರಾದ ಆರ್.ಸಿ. ಮಂಜುನಾಥ್, ಕಲಸೆ ಚಂದ್ರಪ್ಪ, ನಾಗರಾಜ ಹುಲ್ಲತ್ತಿ, ನಾರಾಯಣಪ್ಪ, ರಾಮು, ಮಂಜಮ್ಮ ಇದ್ದರು.