ಸಾಗರ ಕೆಜೆಪಿ ಅಭ್ಯರ್ಥಿ ಬಿರುಸಿನ ಪ್ರಚಾರ
ಸಾಗರ: ಕೆಜೆಪಿ ಅಭ್ಯರ್ಥಿ ಬಿ.ಆರ್. ಜಯಂತ್ ಮಂಗಳವಾರ ಸಾಗರ ನಗರದ ವಿವಿಧ ವಾರ್ಡ್ಗಳಲ್ಲಿ, ಸರ್ಕಾರಿ ಕಚೇರಿ, ಬ್ಯಾಂಕ್, ಕಾಲೇಜುಗಳಲ್ಲಿ ತಮ್ಮ ಬೆಂಬಲಿಗರ ಜತೆ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಎರಡು ಬಾರಿ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಸಲ್ಲಿಸಿರುವ ಪ್ರಾಮಾಣಿಕ ಸೇವೆ ಹಾಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕ್ಷೇತ್ರಕ್ಕೆ ನೀಡಿರುವ ಅನುದಾನ, ನಡೆದಿರುವ ಅಭಿವೃದ್ಧಿ ಕೆಲಸಗಳು ಗೆಲುವು ತಂದು ಕೊಡಲಿದೆ. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಕೆಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಪಕ್ಷದ ಮುಖಂಡ ಟಿ.ಡಿ. ಮೇಘರಾಜ್, ಕ್ಷೇತ್ರದಲ್ಲಿ ಈಗಾಗಲೇ ಮೂರು ಸುತ್ತಿನ ಪ್ರಚಾರ ಕಾರ್ಯ ಮುಗಿದಿದೆ. ಜನರು ಬದಲಾವಣೆ ಬಯಸಿದ್ದು, ಬಿ.ಆರ್. ಜಯಂತರಂತಹ ಪ್ರಾಮಾಣಿಕ ವ್ಯಕ್ತಿ ತಮ್ಮ ಜನ ಪ್ರತಿನಿಧಿಯಾಗಬೇಕು ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ ಎಂದರು.
ಪ್ರಮುಖರಾದ ಮಹೇಶ್, ಗಣೇಶ ಪ್ರಸಾದ್, ರತ್ನಾಕರ ಶೇಟ್, ಲಿಂಗರಾಜ್, ಪ್ರಕಾಶ್ ಕುಂಠೆ, ರಾಧಾಕೃಷ್ಣ ನಾಯಕ್ ಬೇಂಗ್ರೆ, ಆನಂದ್, ಸತೀಶ್ ಮೊಗವೀರ, ಶ್ರೀಕಾಂತ್ ಹಾಜರಿದ್ದರು.