ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಟೋ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದನೆ

Rashmi Kasaragodu
Updated On : 2 Aug 2013, 11:08 am

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಆ.1
ಅಬ್ಬರದ ಮಳೆಯಲ್ಲೇ ಬೇಡಿಕೆ ಈಡೇರಿಸುವಂತೆ ಬೊಬ್ಬಿರಿದ ಆಟೋ ಚಾಲಕರ ಕೂಗಿಗೆ ಜಿಲ್ಲಾಡಳಿತ ಸ್ಪಂದಿಸಿದೆ.
ಗುರುವಾರ ನಗರದಲ್ಲಿ ಮಳೆಯ ಅಬ್ಬರ. ಸುರಿಯುವ ಮಳೆಯಲ್ಲಿ ನೆನೆಯುತ್ತಲೇ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನೂರಾರು ಸಂಖ್ಯೆಯಲ್ಲಿದ್ದ ಆಟೋ ಚಾಲಕರು ತಮ್ಮ ವಿವಿಧ ಬೇಡಿಕೆಯನ್ನು ಮಂಡಿಸಿದರು. ಇವರ ದನಿಗೆ ಸಾತ್ ನೀಡಿದ್ದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಚನ್ನಬಸಪ್ಪ.  
ಆಟೋ ಚಾಲಕರು ಮಂಡಿಸಿದ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಅಧಿಕಾರಿಗಳು ಹಾಗೂ ಕೆ.ಎಸ್.ಈಶ್ವರಪ್ಪನವರನ್ನೊಳಗೊಂಡ ಆಟೋ ಚಾಲಕರ ಸಂಘಟನೆ ಪ್ರಮುಖರೊಂದಿಗೆ ಸಭೆಯನ್ನೂ ನಡೆಸಿ ಬೇಡಿಕೆಯ ಕುರಿತು ಪರಾಮರ್ಶೆ ನಡೆಸಿದರು, ಅಂತಿಮವಾಗಿ ಆಟೋ ಚಾಲಕರು ಸಮಾಧಾನಪಡುವಂತಹ ನಿರ್ಧಾರಗಳನ್ನು ಕೈಗೊಂಡರು.
ಮೂರಂಶದ ಬೇಡಿಕೆ: ಆಟೋ ಹಾಗೂ ಇತರೆ ವಾಹನ ಚಾಲಕರು ಚಾಲನಾ ಪರವಾನಗಿ ಪಡೆಯಲು 8ನೇ ತರಗತಿ ಕಡ್ಡಾಯಗೊಳಿಸಿರುವ ಕ್ರಮ ಕೈಬಿಡಬೇಕು, ನಗರಸಭೆಯಿಂದ ಎಲ್ಲಾ ಆಟೋಗಳಿಗೆ ಉಚಿತವಾಗಿ ಮೀಟರ್ ನೀಡಬೇಕು, ಹಾಗೂ ಶಾಲಾ ಮಕ್ಕಳನ್ನು ಆಟೋದಲ್ಲಿ ಕರೆದೊಯ್ಯುವುದಕ್ಕೆ ನಿಷೇಧ ಹೇರಬಾರದೆಂಬ ಮೂರಂಶದ ಬೇಡಿಕೆ ಇಟ್ಟು ಆಟೋ ಚಾಲಕರು ಬೀದಿಗಿಳಿದಿದ್ದರು.
ಆಟೋ ಚಾಲಕರು ಅನಕ್ಷರಸ್ಥರಾಗಿದ್ದು, ಡಿಎಲ್ ಪಡೆಯಲು ಎಸ್ಎಸ್ಎಲ್ಸಿ ಉತ್ತೀರ್ಣರಾಗಬೇಕೆಂಬ ನಿಯಮ ಸರಿಯಲ್ಲ. ಅದೇ ರೀತಿ ನಗರಸಭೆಯಿಂದ ಒಂದಷ್ಟು ಆಟೋಗಳಿಗೆ ಮಾತ್ರ ಮೀಟರ್ ಉಚಿತವಾಗಿ ನೀಡಲಾಗಿದೆ, ಎಲ್ಲಾ ಆಟೋಗಳಿಗೆ ಉಚಿತವಾಗಿ ನೀಡಬೇಕು ಎಂಬುದು ಆಟೋ ಚಾಲಕರ ವಾದವಾಗಿತ್ತು. ಅದೇ ರೀತಿ ಶಾಲಾ ಮಕ್ಕಳನ್ನು ಕರೆದೊಯ್ಯುವ ವ್ಯವಸ್ಥೆಗೆ ನಿಷೇಧ ಹಾಕುವುದರಿಂದ ಜೀವನ ನಡೆಸುವುದು ಕಷ್ಟವಾಗುವ ಕಾರಣ, ಈ ನಿರ್ಧಾರ ಕೈಬಿಡಬೇಕೆಂಬುದು ಅವರ ಆಗ್ರಹವಾಗಿತ್ತು.
ಬಿಸಿ ಬಿಸಿ ಚರ್ಚೆ: ಪ್ರತಿಭಟನೆಯ ತೀವ್ರತೆ ಹೆಚ್ಚಾದಂತೆ ಜಿಲ್ಲಾಧಿಕಾರಿಯವರು ಖುದ್ದು ಆಸಕ್ತಿ ವಹಿಸಿ ಆಟೋ ಚಾಲಕರೊಂದಿಗೆ ಸಭೆ ನಡೆಸಲು ಮುಂದಾದರು. ಸಭೆಯಲ್ಲಿ ಕೆ.ಎಸ್.ಈಶ್ವರಪ್ಪ ಸಹ ಪಾಲ್ಗೊಂಡರು.
ಮೀಟರ್ ಉಚಿತ ಇಲ್ಲ: ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪ್ರಸ್ತುತ ಹಣವಿಲ್ಲದ ಕಾರಣ ಉಚಿತವಾಗಿ ಮೀಟರ್ ನೀಡದಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಉಚಿತ ಮೀಟರ್ ಕೊಡಲು ಸಾದ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಉತ್ತರದಿಂದ ಸಿಡಿಮಿಡಿಗೊಂಡ ಈಶ್ವರಪ್ಪ, ಮೀಟರ್ ಅಳವಡಿಕೆಗೆ ನಗರಸಭೆಯು ಬಜೆಟ್ನಲ್ಲಿ 50 ಲಕ್ಷ ಅನುದಾನ ಬಜೆಟ್ನಲ್ಲಿ ಮೀಸಲಿರಿಸಲಾಗಿದೆ. ಈ ಹಿಂದಿನ ನಿರ್ಧಾರದಂತೆ ಆಟೋ ಚಾಲಕರಿಗೆ ಉಚಿತವಾಗಿ ಮೀಟರ್ ಅಳವಡಿಕೆ ಮಾಡಿ ಎಂದು ಗಟ್ಟಿ ದನಿಯಲ್ಲೇ ಹೇಳಿದರು.
 ಇದೇ ವೇಳೆ ನಗರಸಭೆ ಎಂಜಿನಿಯರ್ ಸಭೆಗೆ ಮಾಹಿತಿ ನೀಡಿ, ಮೀಟರ್ ಅಳವಡಿಕೆಗೆ ನಗರಸಭೆ ಮೀಸಲಿರಿಸಿದ್ದ 50 ಲಕ್ಷ ದಲ್ಲಿ 27 ಲಕ್ಷ ವೆಚ್ಚವಾಗಿದೆ ಎಂದರು.
ನಂತರ ಮಾತನಾಡಿದ ಡಿಸಿ, ಉಳಿದ ಬಾಕಿ ಅನುದಾನದಲ್ಲಿ ಮೀಟರ್ ಅಳವಡಿಕೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಲಿದೆ. ಆದರೆ ಮೀಟರ್ ಅಳವಡಿಕೆಗೆ ಸಹಾಯಧನ ನೀಡಬೇಕೆ ಬೇಡವೇ ಎಂಬ ನಿರ್ಧಾರವನ್ನು ನಗರಸಭೆಯ ನೂತನ ಆಡಳಿತ ನಿರ್ಧರಿಸುತ್ತದೆ. ಸದ್ಯ ಆಟೋ ಚಾಲಕರಿಗೆ ಮೀಟರ್ ಅಳವಡಿಕೆಗೆ ಅರ್ಜಿ ನೀಡಲಾಗುವುದೆಂದರು.
ಧನಾತ್ಮಕ ನಿಲುವು: ಆಟೋ ಚಾಲಕರ ಬೇಡಿಕೆ ಕುರಿತಂತೆ ಕನ್ನಡಪ್ರಭದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಚಾಲನಾ ಪರವಾನಗಿ ಪಡೆಯಲು ಶೈಕ್ಷಣಿಕ ಅರ್ಹತೆ ಕಡ್ಡಾಯ ಎಂಬ ನಿಯಮ ಬಂದಿದೆ. ಹೀಗಾಗಿ ಜಿಲ್ಲಾಡಳಿತವೇ ಆಟೋ ಚಾಲಕರನ್ನು ಎಸ್ಎಸ್ಎಸ್ಎಲ್ಸಿ ಪರೀಕ್ಷೆ ತೆಗೆದುಕೊಳ್ಳಲು ಪ್ರೋತ್ಸಾಹಿಸಲಿದೆ ಎಂದರು. ಆ.12ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ವಿತರಣೆ ಸೇರಿದಂತೆ ಆಟೋ ಚಾಲಕರಿಗೆ ಸಲಹೆಗಳನ್ನು ನೀಡಲಿದ್ದಾರೆ.
ಕೊಂಚ ರಿಯಾಯ್ತಿ: ಶಾಲಾ ಆಟೋ ಟ್ರಿಪ್ ನಿಷೇಧ ನಿರ್ಧಾರದಲ್ಲೂ ಕೊಂಚ ರಿಯಾಯಿತಿ ಪ್ರಕಟಿಸಲಾಗಿದೆ. ಆಟೋದಲ್ಲಿ ಐದಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುವ ಹಾಗಿಲ್ಲ. ಹಾಗೊಂದು ವೇಳೆ ಕರೆದೊಯ್ದರೆ ಪೊಲೀಸರು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಅವಕಾಶವಿದೆ ಎಂದು ಸೂಚಿಸಲಾಗಿದೆ. ಗುರುವಾರದ ಆಟೋ ಚಾಲಕರ ಹೋರಾಟಕ್ಕೆ ಲಾರಿ ಚಾಲಕರು ಮತ್ತು ಮಾಲಿಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement