ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ವೃಕ್ಷ ಮಿತ್ರರ ಸಮಾವೇಶ

Rashmi Kasaragodu
Updated On : 2 Aug 2013, 11:08 am

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಆ.1
ಹೊಸ ನಗರ ತಾಲೂಕಿನ ಕಾರಣಗಿರಿಯಲ್ಲಿ ಅರಣ್ಯ ಪರಿಸರ ಕಾರ್ಯಕರ್ತರು, ಸಂಸ್ಥೆಗಳ ಸಮಾವೇಶ ಆಗಸ್ಟ್ 2ರಂದು ನಡೆಯಲಿದೆ.
ರಾಜ್ಯದ ಪರಿಸರ ಗಣ್ಯರು, ತಜ್ಞರು ಭಾಗವಹಿಸುವ ಜೀವ ವೈವಿಧ್ಯ ಪ್ರಿಯರ ವೃಕ್ಷ ಮಿತ್ರರ ಸಮ್ಮಿಲನದ ಸಮಾವೇಶವನ್ನು ರಾಜ್ಯ ಮಾಲಿನ ನಿಯಂತ್ರಣ ಮಂಡಳಿ ಅಧ್ಯಕ್ಷ ವಾಮನ ಆಚಾರ್ಯ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ವೈ.ಬಿ. ರಾಮಕೃಷ್ಣ, ಪರಿಸರ ತಜ್ಞ ಪ್ರೊ. ಕುಮಾರಸ್ವಾಮಿ, ವನ್ಯಜೀವಿ ತಜ್ಞ ಡಾ. ಬಾಲಚಂದ್ರ ಸಾಯಿಮನೆ, ಅರಣ್ಯ ಸಂರಕ್ಷಣಾಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ಹಸಿರು ಸಮಾರಂಭದಲ್ಲಿ ಗ್ರಾಮಭಾರತಿ ಸಂಸ್ಥೆಯ ಸೌರ ಗ್ರಾಮ ಯೋಜನೆಗೆ ಚಾಲನೆ ದೊರೆಯಲಿದೆ. ಬಯೋಗ್ಯಾಸ್ ಮಾದರಿ ಪ್ರಾತ್ಯಕ್ಷಿಕೆ ನಡೆಯಲಿದೆ. ಹಲಸು ವೃಕ್ಷಾರೋಪಣ ಅಭಿಯಾನ, ಆಕಾಶವಾಣಿ ಹಸಿರು ಹೆಜ್ಜೆ ಕಾರ್ಯಕ್ರಮದ ಘೋಷಣೆಯಾಗಲಿದೆ. ಹನಿಯ ಶಾಲೆಯ ಜಲ ಸಂವರ್ಧನಾ ಕಾರ್ಯ ಚಾಲನೆ ಆಗಲಿದೆ.
ಅನುಭವ ಮಂಡನೆ: ಗ್ರಾಮ ಅರಣ್ಯ ಸಮಿತಿಗಳು, ಕಾನು ಅಭಿವೃದ್ಧಿ ಬಗ್ಗೆ ಅನುಭವ ಮಂಡಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅರಣ್ಯ ಪರಿಸ್ಥಿತಿ ವರದಿ ಆಧಾರದಲ್ಲಿ ಪರಿಹಾರೋಪಾಯಗಳ ಬಗ್ಗೆ ಸಮಾಲೋಚನೆ ಸಹ ನಡೆಯಲಿದೆ.
ಶರಾವತಿ ನದೀ ಕಣಿವೆಯ ಔಷಧೀ ವೃಕ್ಷ ಸಂಪತ್ತಿನ ರಕ್ಷಣಾ ಉಪಾಯಗಳು, ಅರಣ್ಯ ಉಪ ಉತ್ಪನ್ನ ಸಂಗ್ರಹ, ಏಕಜಾತಿ ನೆಡುತೋಪುಗಳು ಗ್ರಾಮ ಅರಣ್ಯ ಸಮಿತಿಗಳ ಬಲವರ್ಧನೆ, ದೇವರ ಕಾಡು, ಕಾನು ಅರಣ್ಯ ಸಂರಕ್ಷಣೆ, ಅಮ್ಮನ ಘಟ್ಟ, ಕುಮದ್ವತಿ ನದೀಮೂಲ, ಕೊಡಚಾದ್ರಿ ಮುಂತಾದ ಅಂಶಗಳು ಚರ್ಚೆಗೆ ಬರಲಿವೆ. ರೈತರು ವನವಾಸಿಗಳಿಗೆ ನೀಡಲೇಬೇಕಾದ ಸೌಲಭ್ಯಗಳು, ಕಾಯಿದೆ ವಿಷಯ ಪ್ರಸ್ತಾಪ ಆಗಲಿದೆ.
ಗ್ರಾಮ ಭಾರತಿ, ವೃಕ್ಷಲಕ್ಷ, ಹನಿಯ ಗ್ರಾಮ ಅರಣ್ಯ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ಅರಣ್ಯ ಇಲಾಖೆ ಸಹಕಾರದಲ್ಲಿ ಪರಿಸರ ಸಮಾರಂಭ ನಡೆಯಲಿದೆ.
ವನವಾಸಿ ಮುಖಂಡ ಶಾಂತಾರಾಂ ಸಿದ್ಧಿ, ಅರಣ್ಯ ಉಪ ಉತ್ಪನ್ನ ಅಧ್ಯಯನಕಾರ ಡಾ. ನರಸಿಂಹ ವಾನಳ್ಳಿ, ವನ್ಯಜೀವಿ ಜಿಲ್ಲಾ ಗೌರವ ಪಾಲಕ ರವಿ ಹನಿಯ, ವೃಕ್ಷಲಕ್ಷ ಆಂದೋಲನದ ಸಂಚಾಲಕ ಭೀಮನಕೋಣೆ ರಾಘವೇಂದ್ರ, ಹಕ್ರೆ ಸುಬ್ಬರಾವ್, ಕೆ. ವೆಂಕಟೇಶ್, ಮುಂತಾದವರು ಭಾಗವಹಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement