ಮಕ್ಕಳು ಸದೃಢರಾಗಲು ಸಹಕಾರಿ; ಲಲಿತಾ
ಕ.ಪ್ರ.ವಾರ್ತೆ ಟಿ ಸಾಗರ ಟಿ ಆ.1
ರಾಜ್ಯ ಸರ್ಕಾರ ಮಕ್ಕಳಿಗೆ ಹಾಲು ಪೂರೈಸುವ ಕ್ಷೀರಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ ಭವಿಷ್ಯದ ಪ್ರಜೆಗಳು ಸದೃಢರಾಗಿ ಬೆಳೆಯಲು ಅವಕಾಶ ಕಲ್ಪಿಸಿದೆ ಎಂದು ಜಿಪಂ ಸದಸ್ಯೆ ಲಲಿತಾ ನಾರಾಯಣ ಹೇಳಿದರು.
ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹ ವಿಭಾಗದ ವತಿಯಿಂದ ಗುರುವಾರ ಬೆಳಲಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಷೀರಭಾಗ್ಯ ಯೋಜನೆ ಹಾಗೂ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯನ್ನು ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೀರಭಾಗ್ಯ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ಯಶಸ್ವಿಯಾಗಿ ನಡೆಯಬೇಕಾದರೆ ಎಲ್ಲರ ಸಹಕಾರ ಅಗತ್ಯ. ಯೋಜನೆಯೊಂದು ಯಶಸ್ವಿಯಾಗಬೇಕಾದರೆ ನಮ್ಮ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಬಿಸಿಯೂಟದ ಜೊತೆಗೆ ಮಕ್ಕಳಿಗೆ ಹಾಲನ್ನು ಕೊಡುವುದರಿಂದ ಅವರು ಮಾನಸಿಕವಾಗಿ, ದೈಹಿಕವಾಗಿ ಹಾಗೂ ಭೌತಿಕವಾಗಿ ಸದೃಢತೆಯಿಂದ ಬೆಳೆಯಲು ಅನುಕೂಲವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಅಪೌಷ್ಟಿಕತೆ ದೂರ ಮಾಡಿ ಮಕ್ಕಳಲ್ಲಿ ಪೌಷ್ಟಿಕತೆ ತುಂಬುವ ಉದ್ದೇಶ ಕ್ಷೀರಭಾಗ್ಯ ಯೋಜನೆಯದ್ದಾಗಿದೆ ಎಂದರು.
ಜಿಪಂ ಸದಸ್ಯೆ ಸುಮಂಗಲ ರಾಮಕೃಷ್ಣ, ತಾಪಂ ಸದಸ್ಯರಾದ ಜ್ಯೋತಿ ಮುರಳಿಧರ್, ಶ್ವೇತಾ ಉಮೇಶ್, ನಗರಸಭೆ ಸದಸ್ಯರಾದ ರವಿ ಜಂಬಗಾರು, ಎನ್. ಶ್ರೀನಾಥ್, ಪರಿಮಳ, ಬೆಳಲಮಕ್ಕಿ ಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಮೋದ ಹೆಗಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ಸದಾಶಿವ ಹಾಜರಿದ್ದರು.