ಶುಚಿತ್ವಕ್ಕೆ ಮಹತ್ವ ನೀಡಿ: ಸುಂದರೇಶ್
ತೀರ್ಥಹಳ್ಳಿ: ಕ್ಷೀರಭಾಗ್ಯ ಯೋಜನೆಗೆ ಕುವೆಂಪು ಶಾಲೆಯಲ್ಲಿ ಚಾಲನೆ ನೀಡಲಾಯಿತು. ತಾಪಂ ಅಧ್ಯಕ್ಷೆ ಜೀನಾ ವಿಕ್ಟರ್ ಅಧ್ಯಕ್ಷತೆಯಲ್ಲಿ ನೆಡೆದ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಹಾಲು ನೀಡಲಾಯಿತು.
ಜಿಪಂ ಸದಸ್ಯ ಡಾ.ಟಿ.ಎಲ್. ಸುಂದರೇಶ್ ಮಾತನಾಡಿ, ಆರೋಗ್ಯವಂತ ಮನಸ್ಸಿಗೆ ಹಾಲು ಉತ್ತಮ ಆಹಾರ. ಈಗಾಗಲೇ ಯಶಸ್ವಿಯಾಗಿರುವ ಬಿಸಿಯೂಟ ಯೋಜನೆಯಂತೆ ಕ್ಷೀರ ಭಾಗ್ಯ ಯೋಜನೆ ಒಂದಾಗಲಿದೆ ಎಂದರು.
ತಾಪಂ ಸದಸ್ಯ ಕೆಸ್ತೂರು ಮಂಜುನಾಥ ಮಾತನಾಡಿ, ಮಕ್ಕಳು ದೇಶದ ಆಸ್ತಿ. ಸ್ಥಿರತೆ ಮತ್ತು ದೃಢತೆಗಾಗಿ ಹಾಲು ಉತ್ತಮ ಪೌಷ್ಠಿಕ ಆಹಾರ. 15ದಿನಕ್ಕೊಮ್ಮೆ ಶಾಲಾ ಉಸ್ತುವಾರಿ ವಿಭಾಗ ಹಾಲು ತಯಾರಿಕಾ ವ್ಯವಸ್ಥೆಯ ಶುಚಿತ್ವದ ಕಡೆ ಗಮನ ಹರಿಸಬೇಕು ಎಂದು ಹೇಳಿದರು. ಕ್ಷೀರಭಾಗ್ಯ ಯೋಜನೆಯ ಕಿರುಪರಿಚಯ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ರಕ್ತಹೀನತೆ ಮತ್ತು ಅಪೌಷ್ಠಿಕತೆಯ ಕೊರತೆ ನೀಗಿಸುವ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿಯಾಗಿದೆ ಎಂದರು.
ಕಾರ್ಯನಿರ್ವಣಾಧಿಕಾರಿ ಪುಟ್ಟಸ್ವಾಮಿ, ಅಕ್ಷರ ದಾಸೋಹದ ಅಧಿಕಾರಿ ಗಿರಿರಾಜ್, ತಹಸೀಲ್ದಾರ್ ಲಿಂಗಯ್ಯ, ತಾಪಂ ಸದಸ್ಯ ಬಾಳೇಹಳ್ಳಿ ಪ್ರಭಾಕರ್, ಜಿಪಂ ಸದಸ್ಯ ಹಾರೊಗೊಳಿಗೆ ಪದ್ಮನಾಭ, ಡಿ.ಎಸ್. ವಿಶ್ವನಾಥ ಶೆಟ್ಟಿ, ಸುರೇಶ್ ಇದ್ದರು.