ಸಕ್ರೆಬೈಲು ಆನೆ ಬಿಡಾರದಲ್ಲಿ ಹೊಸ ಕಿರಣ
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಕೆಲವೇ ತಿಂಗಳುಗಳ ಹಿಂದೆ ಮಖನಾ ಎಂಬ ಆನೆಯ ಸಾವಿನಿಂದ ಸಂಕಟ ಅನುಭವಿಸಿದ್ದ ಸಕ್ರೆಬೈಲು ಆನೆ ಬಿಡಾರದಲ್ಲಿ ಗುರುವಾರ ಸಂಭ್ರಮ ಮನೆ ಮಾಡಿತ್ತು. 15 ವರ್ಷದ ನೇತ್ರಾ ಹೆಣ್ಣು ಮರಿಗೆ ಜನ್ಮ ನೀಡಿತ್ತು.
ಎಂದಿನಂತೆ ಮಾವುತರು ಆನೆಯನ್ನು ಕಾಡಿಗೆ ಬಿಟ್ಟಿದ್ದರು. ರಾತ್ರಿಯೇ ಮರಿ ಜನನವಾಗಿದ್ದು, ಬೆಳಿಗ್ಗೆ ವಾಪಸು ಕರೆದುಕೊಂಡು ಬರಲು ಕಾಡಿಗೆ ಹೋದಾಗ ವಿಷಯ ಗೊತ್ತಾಗಿದೆ.
ವಿಶೇಷವೆಂದರೆ 15 ವರ್ಷ ವಯೋವಾನದ ನೇತ್ರಾಗೆ ಇದು ಎರಡನೇ ಮರಿ. ಮೊದಲ ಗಂಡುಮರಿ ಸೂರ್ಯನಿಗೆ ಈಗ ನಾಲ್ಕು ವರ್ಷ. ನೇತ್ರಾ ತಾಯಿ ಗೀತಾ ಸಹ ಇದೇ ಬಿಡಾರ ವಾಸಿ. ಮೂರು ತಲೆಮಾರನನ್ನು ಕಂಡ ಸಂಭ್ರಮ ಬಿಡಾರದಲ್ಲಿ ಗುರುವಾರ ಮನೆ ಮಾಡಿತ್ತು.
ಹೆರಿಗೆ ಮನೆಗೆ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಜೆ. ರವಿಕುಮಾರ್, ಪಶುವೈದ್ಯಾಧಿಕಾರಿ ಚಂದ್ರಶೇಖರ ಸುಂಕದ್ ಸೇರಿದಂತೆ ಇಲಾಖೆಯ ಅರಣ್ಯ ಸಿಬ್ಬಂದಿ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಪರಸ್ಪರ ಚರ್ಚಿಸಿ ಬಿಡಾರದ ನೂತನ ಸದಸ್ಯಗೆ ಕಿರಣ ಎಂಬ ಹೆಸರಿಡಲು ತೀರ್ಮಾನಿಸಲಾಯಿತು.
ಸಂಗಾತಿ ಗಂಗೆ: ಯಾವುದೇ ಆನೆಯು ಗರ್ಭ ಧರಿಸಿದ ಸಂದರ್ಭದಲ್ಲಿಯೇ ಹೆಣ್ಣಾನೆಯೊಂದನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತದೆ. ಹೆರಿಗೆ ಸಂದರ್ಭದಲ್ಲಿಯೂ ಈ ಆನೆ ನೆರವಾಗುತ್ತದೆ. ನಂತರ ಮರಿಯ ಲಾಲನೆ-ಪಾಲನೆಗೂ ನೆರವಾಗುತ್ತದೆ. ಮರಿ ಆನೆಗೆ ಯಾವುದೇ ರೀತಿಯ ತೊಂದರೆ ಆದರೆ, ತಾಯಿ ಆನೆಗಿಂತ ಹೆಚ್ಚು ಸಿಟ್ಟು ಬರುವುದು ಈ ಸಂಗಾತಿ ಆನೆಗೇ. ತೊಂದರೆ ಮಾಡಿದವರ ಮೇಲೆ ಹರಿಹಾಯುತ್ತದೆ. ಆನೆಗಳನ್ನು ಸಾಕುವ ಬಿಡಾರದಲ್ಲಿ ತಾಯಿ- ಮಗುವನ್ನು ಬೇರ್ಪಡಿಸುವ ವೀನಿಂಗಗ್ಕ್ರಿಯೆ ನಡೆಯುವವರೆಗೂ ಇವರ ಸ್ನೇಹ ಮುಂದುವರಿಯುತ್ತದೆ.
ಈ ರೀತಿ ನೇತ್ರ ಆರಿಸಿಕೊಂಡಿದ್ದು ಬಿಡಾರದ ಹಿರಿ ಆನೆ, 69 ವರ್ಷದ ಗಂಗೆಯನ್ನು. ಹೆರಿಗೆ ಇನ್ನೈದು ತಿಂಗಳು ಇರುವಾಗಲೇ ಇಬ್ಬರೂ ಯಾವಾಗಲೂ ಜತೆಗಿರುತ್ತಿದ್ದರು. ಹೆರಿಗೆ ಸಂದರ್ಭದಲ್ಲಿಯೂ ಒಟ್ಟಿಗಿದ್ದರು.
ಮಾವುತ ಖುದ್ರತ್ ಪಾಷಾಗೆ (ಠ್ಡ್ಟಿಡಿಜ) ನನ್ನ ಲೆಕ್ಕದ ಪ್ರಕಾರ ಆನೆ ಹೆರಿಗೆಗೆ ಇನ್ನೂ ಎರಡು ತಿಂಗಳು ಟೈಮಿತ್ತು (ಠ್ಡ್ಟಿಡಿಜ) ಅಂತ ಯೋಜಿಸುತ್ತಲೇ ನೇತ್ರಾಳ ದೇಖರೇಖಿ ಮಾಡುತ್ತಿದ್ದ. ಆದರೂ ಖುದ್ರತ್ ಪಾಷಾಗೆ ಡಬಲ್ ಸಂಭ್ರಮ. ಈತ ನೇತ್ರಾಳ ಜವಾಬ್ದಾರಿ ಪಡೆದ ಮೇಲೆ ಆಗುತ್ತಿರುವ ಎರಡನೇ ಹೆರಿಗೆ ಇದು. ಮೊದಲ ಮಗು ಸೂರ್ಯ ಜನಿಸಿದಾಗಲೂ ನೇತ್ರಾಳ ಜವಾಬ್ದಾರಿ ಖುದ್ರತ್ ಮೇಲಿತ್ತು. ಜತೆಗೆ ಕವಾಡಿ ಫಯಾಸ್ ಪಾಷಾಗೂ ಸಹ.
ಹೊಸ ಸದಸ್ಯನ ಸೇರ್ಪಡೆಯೊಂದಿಗೆ ಬಿಡಾರದಲ್ಲೀಗ 10 ಗಂಡಾನೆಗಳು, 8 ಹೆಣ್ಣಾನೆಗಳಿವೆ.
ಫುಲ್ ಪಾರ್ಟಿ: ಮರಿಯನ್ನು ಹೆತ್ತು ಸುಸ್ತಾಗಿದ್ದ ಆನೆಗೆ ಭರ್ಜರಿ ಪಾರ್ಟಿ ಕೊಡುವ ತಯಾರಿಯು ಗುರುವಾರ ಬಿಡಾರದಲ್ಲಿ ನಡೆಯುತ್ತಿತ್ತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಜೆ. ರವಿಕುಮಾರ್ ಅವರು ಸೂಕ್ತ ಮಾರ್ಗದರ್ಶನವನ್ನು ಕೊಡುತ್ತಿದ್ದರು.
10 ದಿನಗಳ ಕಾಲ ನೇತ್ರಾಗೆ ಹಸಿ ಹುಲ್ಲಿನ ಜತೆಗೆ ಅವಲಕ್ಕಿಯೊಂದಿಗೆ ಬೆರಿಸದ ಕಾಳಿನ ಪುಡಿಯನ್ನು ಕೊಡಲಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಒಂದು ಫುಲ್ ಬಾಟಲ್ ಬ್ರಾಂದಿಯನ್ನು ನೇತ್ರಾಗೆ ನೀಡಲಾಗುವುದು. ಇದನ್ನು ಪ್ರತ್ಯೇಕವಾಗಿ ಅಥವಾ ಅವಲಕ್ಕಿಯೊಂದಿಗೆ ಬೆರೆಸಿ ನೀಡಲಾಗುವುದು. ಇದೇನು ವಿಶೇಷವಲ್ಲ, ಮೈ ಶಾಖವನ್ನು ಹೆಚ್ಚಿಸಲು ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಬಿಡಾರದ ಆನೆಗಳಿಗೆ ನೀಡಲಾಗುತ್ತದೆ.
ಸಂತಸ-ಸಂಭ್ರಮ
ಹೆಣ್ಣು ಮರಿಯ ಜನನವಾಗಿರುವುದು ಅತ್ಯಂತ ಸಂತಸದ ವಿಷಯ. ಏಕೆಂದರೆ ಬಿಡಾರಕ್ಕೆ ಹೆಣ್ಣು ಆನೆಗಳ ಅಗತ್ಯವಿತ್ತು. ಈ ಮರಿ ಸೇರ್ಪಡೆಯನ್ನು ನಾವು ಸಂತೋಷದಿಂದ ಸ್ವಾಗತಿಸುತ್ತಿದ್ದೇವೆ.
- ಟಿ.ಜೆ. ರವಿಕುಮಾರ್, ಡಿಎಫ್ಓ