ಕನಸಾಗಿರುವ ಕೊಂಕಣ ರೈಲು- ವರ್ತುಲ ರಸ್ತೆ ಸಂಪರ್ಕ
ಶಿವಮೊಗ್ಗ: ಈ ಹಿಂದೆ ರೇಲ್ವೆ ಸಚಿವರಾಗಿದ್ದ ಮುನಿಯಪ್ಪ ಅವರು ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೀಡಿದ್ದ ಹಲವು ಭರವಸೆ ಇನ್ನೂ ಬಾಕಿ ಇವೆ. ಇವುಗಳನ್ನು ಹಾಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈಡೇರಿಸುವರೇ....?
ಬಹುಮುಖ್ಯವಾಗಿ ತಾಳಗುಪ್ಪ- ಹೊನ್ನಾವರ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರದ ಪರವಾಗಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಶೇ.60 ಪಾಲು ಕೊಡುವ ಭರವಸೆ ನೀಡಿದ್ದರು. ಅದಿನ್ನೂ ಅನುಷ್ಠಾನಕ್ಕೆ ಬಂದಿಲ್ಲ.
ಸುರಂಗ ಮಾರ್ಗ ನಿರ್ಮಿಸಿ ಸಂಪರ್ಕಿಸಬಹುದೆಂದು ರೇಲ್ವೆ ಸಚಿವ ಮುನಿಯಪ್ಪ ಅವರು ತಿಳಿಸಿದ್ದರು. ಈ ಬಗ್ಗೆ ಸ್ಪಷ್ಟ ಭರವಸೆಯನ್ನು ಜಿಲ್ಲೆಯ ಜನತೆ ನಿರೀಕ್ಷಿಸುತ್ತಿದ್ದಾರೆ.
ಕಾಮಗಾರಿ ಸ್ಥಗಿತ: ಜನರ ಕಣ್ಣಿಗೆ ಕಾಣುವಂತೆ 100 ಅಡಿ ವರ್ತುಲ ರಸ್ತೆಯ ಕಾಮಗಾರಿ ರೈಲು ನಿಲ್ದಾಣ ಭಾಗದಲ್ಲಿ ಸ್ಥಗಿತವಾಗಿದೆ.
ರೈಲು ನಿಲ್ದಾಣದ ಎದುರಿನಲ್ಲಿ ಸಾಗುವುದಕ್ಕೆ ರೇಲ್ವೆ ಇಲಾಖೆಯೇ ಆಕ್ಷೇಪ ವ್ಯಕ್ತಪಡಿಸಿತ್ತು. ಕೊನೆಗೆ ರೇಲ್ವೆ ಕ್ವಾರ್ಟರ್ಸ್ನ ಬದಿಯಲ್ಲಿ ಸಾಗುವುದಕ್ಕೆ ಅವಕಾಶ ಮಾಡುವುದಾಗಿ ರೇಲ್ವೆ ಸಚಿವ ಮುನಿಯಪ್ಪ ಭರವಸೆಯನ್ನೂ ನೀಡಿದ್ದರು.
ಈ ಜಾಗ ಸ್ವಾಧೀನಕ್ಕೆ ಸುಮಾರು ರು. 4 ಕೋಟಿ ಶುಲ್ಕ ನೀಡುವುದಾಗಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಭರವಸೆ ನೀಡಿದ್ದರು. ನಂತರ ಹಣ ಜಿಲ್ಲಾಡಳಿತಕ್ಕೆ ಬಂದಿತ್ತು.
ಕಂದಾಯ ಇಲಾಖೆಗೆ ಸೇರಿದ್ದು: ನಂತರ ಗೋತ್ತಾಗಿದ್ದೇನೆಂದರೆ ಯಾವ ಜಾಗವನ್ನು ರೇಲ್ವೆ ಇಲಾಖೆ ಶುಲ್ಕ ಪಡೆದು ಜಿಲ್ಲಾಡಳಿತಕ್ಕೆ ಕೊಡುವುದಾಗಿ ಹೇಳಿತ್ತೋ ಆ ಜಾಗ ಕಂದಾಯ ಇಲಾಖೆಗೇ ಸೇರಿದ್ದಾಗಿತ್ತು.
ಇದಾದ ನಂತರ ವರ್ತುಲ ರಸ್ತೆಯನ್ನು ಸೇರಿಸುವ ಯಾವ ಪ್ರಯತ್ನವೂ ನಡೆಯಲಿಲ್ಲ.
ಈ ಬಗ್ಗೆ ಶನಿವಾರ ನಗರಕ್ಕೆ ಆಗಮಿಸುತ್ತಿರುವ ರೈಲ್ವೆ ಸಚಿವರಿಂದ ಸ್ಪಷ್ಟ ಭರವಸೆಯನ್ನು ಜನರು ನಿರೀಕ್ಷಿಸುತ್ತಿದ್ದಾರೆ.
ಇಷ್ಟೇ ಅಲ್ಲದೇ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತಕುಮಾರ್ ಅವರು ಜಿಲ್ಲೆಯ ಹಲವು ಬೇಡಿಕೆಗಳನ್ನು ರೇಲ್ವೆ ಸಚಿವರ ಗಮನಕ್ಕೆ ತರಲು ನಿರ್ಧರಿಸಿದೆ.
- ಶಿವಮೊಗ್ಗ ಹಳೇ ರೈಲು ನಿಲ್ದಾಣದಲ್ಲಿ ಯಾವ ಕನಿಷ್ಠ ಸೌಲಭ್ಯಗಳೂ ಇಲ್ಲ. ಇಲ್ಲಿ ಮುಂಗಡ ಟಿಕೆಟ್ ನೀಡಿವ ವ್ಯವಸ್ಥೆ ಇಲ್ಲ. ಈ ನಿಲ್ದಾಣದಿಂದ ಅರ್ಧದಷ್ಟು ಪ್ರಯಾಣಿಕರು ಈ ನಿಲ್ದಾಣ ಬಳಸುತ್ತಿದ್ದು, ಇಲ್ಲಿ ಸೌಲಭ್ಯಗಳ ಅಗತ್ಯವಿದೆ.
- ರಾತ್ರಿ ತಾಳಗುಪ್ಪ- ಬೆಂಗಳೂರು ರೈಲು ಯಾವಾಗಲೂ ಪ್ರಯಾಣಿಕರಿಂದ ಕಿಕ್ಕಿರಿದಿರುತ್ತದೆ. ಈ ರೈಲಿಗೆ ಇನ್ನೂ ಐದು ಬೋಗಿಗಳನ್ನು ಜೋಡಿಸುವ ಅಗತ್ಯವಿದೆ.
- ಶಿವಮೊಗ್ಗದಿಂದ ಹೊರಡುವ ಬೆಳಗಿನ ಇಂಟರ್ಸಿಟಿ ರೈಲು ಒಂದನೇ ಪ್ಲಾಟ್ಫಾರಂನಿಂದ ಹೊರಡಲಿ ಹೊರಡಲಿ ಎಂದು ಬಹಳ ಸಲ ಅಧಿಕಾರಿಗಳಿಗೆ ವಿನಂತಿಸುತ್ತಿದ್ದರೂ ಅವರು ಸ್ಪಂದಿಸುತ್ತಿಲ್ಲ.
- ಶಿವಮೊಗ್ಗ -ಹರಿಹರ ರೈಲು ಮಾರ್ಗದ ಬಗ್ಗೆ ಇಲಾಖೆಯಿಂದ ಅಸ್ಪಷ್ಟ ಉತ್ತರ ಬರುತ್ತಿದೆ. ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಸಚಿವರು ಸ್ಪಷ್ಟನೆ ನೀಡಬೇಕು.
- ಶಿವಮೊಗ್ಗದಿಂದ ಸಂಜೆ ಹೊರಟು ಬೆಂಗಳೂರು ತಲುಪುವ ಹಾಗೂ ಬೆಂಗಳೂರಿನಿಂದ ಬೆಳಿಗ್ಗೆ ಹೊರಟು ಶಿವಮೊಗ್ಗ ತಲುಪುವ ಇನ್ನೊಂದು ಇಂಟರ್ಸಿಟಿ ರೈಲಿನ ಅಗತ್ಯ ಮಲೆನಾಡಿಗಿದೆ.
- ಶಿವಮೊಗ್ಗ ನಾಗರಿಕರಿಗೆ ಅಥವಾ ರೇಲ್ವೆ ಬಳಕೆದಾರರಿಗೆ ಮೈಸೂರು ವಲಯದಲ್ಲಿ ರೇಲ್ವೆ ಬಳಕೆದಾರರ ಸಮಿತಿಯಲ್ಲಾಗಲಿ, ಹುಬ್ಬಳ್ಳಿಯ ಪ್ರಾಂತ್ಯ ರೇಲ್ವೆ ಬಳಕೆದಾರರ ಸಮಿತಿಯಲ್ಲಾಗಲಿ ಅವಕಾಶ ನೀಡಿಲ್ಲ.
ಮೈಸೂರು ರೇಲ್ವೆ ಬಳಕೆದಾರರ ಸಮಿತಿಯಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಇದ್ದ ಪ್ರಾತಿನಿಧ್ಯವನ್ನು ಅಧಿಕಾರಿಗಳು ದುರುದ್ದೇಶದಿಂದ ಕೈಬಿಟ್ಟಿದ್ದಾರೆ.
ಈ ಅನ್ಯಾಯವನ್ನು ಸರಿಪಡಿಸಬೇಕು.