ಪಡಿತರ- ನಿಗದಿಗಿಂತ ಹೆಚ್ಚು ದರ ವಸೂಲಿ: ಆರೋಪ
ಶಿಕಾರಿಪುರ: ತಾಲೂಕಿನ ಬಡ ಅರ್ಹ ಫಲಾನುಭವಿಗಳಿಗೆ ಸರ್ಕಾರ ನೀಡುತ್ತಿರುವ ಕಡಿಮೆ ದರದ ಅಕ್ಕಿ ಮತ್ತಿತರ ದಾನ್ಯಗಳನ್ನು ನ್ಯಾಯಬೆಲೆ ಅಂಗಡಿ ಮಾಲಿಕರು, ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿಗಳು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ವಸೂಲಿ ಮಾಡುವ ಮೂಲಕ ಹಗಲು ದರೋಡೆ ನಡೆಸುತ್ತಿದ್ದು ಈ ಕಳ್ಳದಂಧೆಯನ್ನು ತಡೆಗಟ್ಟಲು ಸರ್ಕಾರಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪಟ್ಟಣದ 16 ನೇ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಗಂಗೊಳ್ಳಿ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಕೆಲ ನ್ಯಾಯ ಬೆಲೆ ಅಂಗಡಿ ಮಾಲಕರು ಆಹಾರ ಇಲಾಖೆಯ ಸರ್ಕಾರಿ ಅಧಿಕಾರಿಗಳ ಜತೆ ಅಕ್ರಮವಾಗಿ ಕೈಜೋಡಿಸಿ ಕೆಜಿ ಅಕ್ಕಿಗೆ 25 ಪೈಸೆ ಹೆಚ್ಚು ಹಣ ವಸೂಲಿ ಜತೆಗೆ 30 ಕೆಜಿ ಅಕ್ಕಿಯನ್ನು ಕಡಿತಗೊಳಿಸಿ 27 ರಿಂದ 28 ಕೆಜಿ ವಿತರಿಸುವ ಮೂಲಕ ಸರ್ಕಾರದ ಯೋಜನೆಯ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು.
ಕಡುಬಡವರಿಗೆ ಅನ್ಯಾಯವೆಸಗುತ್ತಿರುವ ಅಂಗಡಿ ಮಾಲಿಕರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.