ಮಳೆಗೆ ಗೌರಿಹಳ್ಳ ಭರ್ತಿ
ಕ.ಪ್ರ.ವಾರ್ತೆ ಟಿ ಶಿಕಾರಿಪುರ ಟಿ ಆ.2
ತಾಲೂಕಿನಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಗೆ ಬಹುತೇಕ ಎಲ್ಲಾ ಕೆರೆಕಟ್ಟೆ ಭರ್ತಿಯಾಗಿ ಹಲವೆಡೆ ಗ್ರಾಮದ ಮನೆಗಳಿಗೆ ನೀರು ನುಗ್ಗಿ ನೂರಾರು ಎಕರೆ ಬೆಳೆ ಹಾನಿಯಾಗಿದೆ.
ಪಟ್ಟಣದ ಕುಮದ್ವತಿ ಸೇತುವೆ ಸಮೀಪದ ಗೌರಿಹಳ್ಳ ಭರ್ತಿಯಾಗಿ ಶಿಕಾರಿಪುರ- ಶಿರಾಳಕೊಪ್ಪ ಸಂಪರ್ಕ ರಸ್ತೆಯ ಮೇಲೆ ನೀರು ವಿಪರೀತವಾಗಿ ಹರಿಯುತ್ತಿದ್ದು ಇದರಿಂದಾಗಿ ಗುರುವಾರ ರಾತ್ರಿಯಿಂದ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.
ತುಂಬಿದ ಗೌರಿಹಳ್ಳ: ಇದರಿಂದ ಗ್ರಾಮೀಣ ಭಾಗದ ಹಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದ 3-4 ವರ್ಷದಿಂದ ಇದೇ ಪ್ರಥಮ ಬಾರಿಗೆ ಗೌರಿಹಳ್ಳ ತುಂಬಿ ಹರಿಯುವ ಮೂಲಕ ಸಂಪರ್ಕ ಕಡಿತಗೊಂಡಿದ್ದು, ಸಮೀಪದ ಕೊಟ್ಟ ಮತ್ತಿತರ ಗ್ರಾಮಗಳು ನೀರಿನಿಂದಾವೃತವಾಗುವ ಲಕ್ಷಣ ಗೋಚರವಾಗಿದೆ.
ಗುರುವಾರ ರಾತ್ರಿ ಗೌರಿಹಳ್ಳ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುವಾಗ ಬಲವಂತವಾಗಿ ಲಾರಿಯನ್ನು ದಾಟಿಸಲೆತ್ನಿಸಿ ನೀರಿನಲ್ಲಿ ಅರ್ಧ ಮುಳುಗಿದೆ.
ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ಕಾಳೇನಹಳ್ಳಿ ಬಳಿಯ ಸಂಗಮದ ಮೂಲಕ ಗೌರಿಹಳ್ಳ ಸೇರುತ್ತಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ಅಧಿಕ ನೀರಿನಿಂದಾಗಿ ಸಂಪರ್ಕ ಕಡಿತವಾಗಿ ಸಮೀಪದ ಹಳ್ಳಿಗಳು ನೀರಿನಿಂದಾವೃತವಾಗುವ ಭೀತಿ ಎದುರಿಸುವ ಹಿನ್ನಲೆಯಲ್ಲಿ ಕಳೆದ ವರ್ಷ ರಸ್ತೆಯನ್ನು ಎತ್ತರಿಸಿ ದೊಡ್ಡ ಸಿಮೆಂಟ್ ಪೈಪ್ ಅಳವಡಿಸಿದ್ದು, ಈ ಬಾರಿಯ ವಿಪರೀತ ಮಳೆಯಿಂದಾಗಿ ರಸ್ತೆಯ ಮೇಲೆ ಹರಿಯುತ್ತಿದೆ.
ಜಮೀನಿಗೆ ನೀರು: ತಾಲೂಕಿನ ಕಲ್ಮನೆ, ಗಾಮ, ಈಸೂರು, ಅಂಜನಾಪುರ ಮತ್ತಿತರ ಗ್ರಾಮದಲ್ಲಿ ಮಳೆಯಿಂದಾಗಿ ತೀವ್ರ ರೀತಿಯಲ್ಲಿ ಬೆಳೆ ನಾಶದ ಭೀತಿಯನ್ನು ರೈತಾಪಿ ವರ್ಗ ಎದುರಿಸುತ್ತಿದ್ದು, ಅಂಜನಾಪುರ ಜಲಾಶಯದ ಬಲದಂಡೆ ನಾಲೆಯಲ್ಲಿ ಹೆಚ್ಚುವರಿ ನೀರು ಸತತವಾಗಿ ಹೊರಬಿಟ್ಟ ಕಾರಣ ಸಮೀಪದ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ.
ಅರಿಷಿಣೆಗೆರೆ ಗ್ರಾಮದ ಕಲಮಂದಿರ ಕಟ್ಟೆಕೆರೆ ಭರ್ತಿಯಾಗಿ ನೀರು ಕೋಡಿ ಮೇಲೆ ಹರಿದ ಪರಿಣಾಮ ಸಮೀಪದ ಹಲವು ಮನೆಗಳು ಜಲಾವೃತವಾಗಿದ್ದು, ಮಾಡರವಳ್ಳಿ ಕೆರೆ ನೀರು ನಾಲೆ ಮೂಲಕ ಜಾಲಿಕಟ್ಟೆ ಕೆರೆಗೆ ತೀವ್ರ ರೀತಿಯಲ್ಲಿ ಹರಿದುಬರುತ್ತಿದೆ.
ಸ್ಥಳಕ್ಕೆ ತಹಸೀಲ್ದಾರ್ ಪ್ರಕಾಶ್ ಗಣಾಚಾರಿ, ತಾಪಂ ಇಒ ಚಂದ್ರಶೇಖರಪ್ಪ, ಮೆಸ್ಕಾಂ ಎಂಜಿನಿಯರರು ಆಗಮಿಸಿ ಅಪಾಯದಲ್ಲಿದ್ದ ಸಮೀಪದ ಮನೆಯ ಸದಸ್ಯರನ್ನು ತೆರವುಗೊಳಿಸಿದ್ದಾಗಿ ತಿಳಿಸಿದ್ದಾರೆ.
ಮನೆಗೆ ಹಾನಿ: ತಾಲೂಕಿನಲ್ಲಿ ಮಳೆಯಿಂದಾಗಿ ಇದುವರೆಗೆ 30ಕ್ಕೂ ಅಧಿಕ ಮನೆಗೆ ಹಾನಿಯಾಗಿದ್ದು, ಉಡುಗಣಿ ಹೋಬಳಿಯ ನಾಗಿಹಳ್ಳಿ ಗ್ರಾಮದ ಕೆರೆ ಒಡೆದಿರುವುದಾಗಿ ತಾಲೂಕು ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.