ರೇಲ್ವೆ ಕ್ರಾಸಿಂಗ್ ಸಮಸ್ಯೆಗೆ ಪರಿಹಾರವೆಂತು
ಶ್ರೀಕಾಂತ / ಮೋಹನ್
ಕ.ಪ್ರ.ವಾರ್ತೆ ಶಿವಮೊಗ್ಗ ಆ.2
ಈ ಸಮಸ್ಯೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾಲಿಗೆ ಗುಲಗಂಜಿ ಗಾತ್ರದ ಸಮಸ್ಯೆ. ಆದರೆ, ಜನ ಸಾಮಾನ್ಯರಿಗೆ ಮಾತ್ರ ಪ್ರತಿ ನಿತ್ಯ ಅರಗಿಸಿಕೊಳ್ಳಲಾಗದಷ್ಟು ದೊಡ್ಡ ಸಮಸ್ಯೆ.
ಹೆಚ್ಚು ಜನಸಂದಣಿ ಇರುವ ಹಾಗೂ ಹೆಚ್ಚಿನ ಪ್ರಮಾಣದ ವಾಹನ ದಟ್ಟಣೆ ಇರುವ ಶಿವಮೊಗ್ಗದ ಹೊಳೆಹೊನ್ನೂರು ರಸ್ತೆ ರೇಲ್ವೇ ಕ್ರಾಸಿಂಗ್, ಸವಳಂಗ ರಸ್ತೆ ರೇಲ್ವೇ ಕ್ರಾಸಿಂಗ್ ಹಾಗೂ ಕಡದಕಟ್ಟೆ (ಭದ್ರಾವತಿ) ರೇಲ್ವೇ ಕ್ರಾಸಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಬೃಹದಾಕಾರವಾಗಿ ಬೆಳೆಯುತ್ತಲೇ ಇದೆ. ರೈಲುಗಳ ಸಂಖ್ಯೆ ಹೆಚ್ಚಾದಂತೆ ಸಮಸ್ಯೆ ತೀವ್ರತೆ ಹೆಚ್ಚಾಗುತ್ತಿದೆ.
ನಿತ್ಯ ಗೋಳು: ಶಿವಮೊಗ್ಗ ಹಳೇ ಸೇತುವೆ ಅಂಚಿನಲ್ಲಿರುವ ರೇಲ್ವೇ ಕ್ರಾಸಿಂಗ್ ಜನಸಾಮಾನ್ಯರ ಪಾಲಿಗೆ ನರಕ ಸದೃಶ್ಯ. ಹೊಳೆಹೊನ್ನೂರು, ಚನ್ನಗಿರಿ, ಚಿತ್ರದುರ್ಗ ಕಡೆಗೆ ಹೋಗುವ ಮತ್ತು ಅಲ್ಲಿಂದ ಶಿವಮೊಗ್ಗ ನಗರಕ್ಕೆ ಬರುವ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಅದೇ ರೀತಿ ಪುರಲೆ, ಗುಡ್ಡೇಕಾಲ್ ವ್ಯಾಪ್ತಿಯಲ್ಲಿ ನಗರ ಬೆಳೆಯುತ್ತಿದ್ದು, ಈ ಪ್ರದೇಶದ ಜನರು ಓಡಾಟಕ್ಕೆ ಇದೇ ರೇಲ್ವೇ ಕ್ರಾಸಿಂಗ್ ಬಳಸುವುದು ಅನಿವಾರ್ಯ. ಪ್ರತಿನಿತ್ಯ 10ರಿಂದ 12 ಬಾರಿ ರೇಲ್ವೇ ಗೇಟ್ ಹಾಕುವುದರಿಂದಾಗಿ ಪಾದಚಾರಿಗಳು, ವಾಹನ ಸವಾರರು ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ.
ವಾಹನ ಸರತಿ: ಪ್ರತಿಬಾರಿ ರೈಲು ಬಂದಾಗ ಗೇಟ್ ಹಾಕುತ್ತಿದ್ದಂತೆ ವಾಹನ ಸರತಿ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತದೆ. ಗೇಟು ತೆರೆಯುತ್ತಿದ್ದಂತೆ ಏಕಾಏಕಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಇಲ್ಲಿ ಖಾಯಂ ಗೋಳು.
ತರಾತುರಿಯಲ್ಲಿರುವ ನೂರಾರು ಮಂದಿ ರೈಲು ಆಗಮನ ಸಂದರ್ಭದಲ್ಲೇ ಗೇಟಿನಡಿ ನುಗ್ಗಿ ಹಳಿ ದಾಟುವುದು ಇಲ್ಲಿ ಸಾಮಾನ್ಯವಾಗಿದೆ. ಇದೇ ವಿಚಾರವಾಗಿ ಗೇಟ್ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ವಾಗ್ಯುದ್ಧ ನಡೆಯುತ್ತಿರುತ್ತದೆ.
ಇದೇ ರೀತಿ ಸವಳಂಗ ರಸ್ತೆಯಲ್ಲಿರುವ ರೇಲ್ವೆ ಕ್ರಾಸಿಂಗ್ನಲ್ಲೂ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಾಗುತ್ತಿದೆ. ನವುಲೆ ಕೆರೆಯಾಚೆಗಿನ ಪ್ರದೇಶ ಬೆಳೆಯಲಾರಂಭಿಸುತ್ತಿದ್ದಂತೆ ವಾಹನ ಸಂಚಾರ ದಟ್ಟಣೆ ವ್ಯಾಪಕವಾಗಿ ಹೆಚ್ಚಾಗಿದೆ. ಇದೀಗ ರೈಲುಗಳ ಸಂಖ್ಯೆಯೂ ಹೆಚ್ಚಾಗುತ್ತಿರುವ ಕಾರಣ, ಈ ರೈಲ್ವೆ ಗೇಟ್ನಲ್ಲಿ ಸಮಸ್ಯೆ ಬಿಗಡಾಯಿಸಲಾರಂಭಿಸಿದೆ.
ಕಡದಕಟ್ಟೆ ಗೋಳು: ಭದ್ರಾವತಿ ಕಡದಕಟ್ಟೆ ಬಳಿ ಇರುವ ರೇಲ್ವೆ ಕ್ರಾಸಿಂಗ್ ಗೇಟ್ಗೆ ಸರಿಯಾದ ಕಾಯಕಲ್ಪ ಸಿಗದೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಗೇಟ್ ಇರುವುದರಿಂದಾಗಿ ವಾಹನ ಸಂಚಾರಕ್ಕೆ ತೀರಾ ಸಮಸ್ಯೆ ಉಂಟಾಗುತ್ತಿದೆ. ಅಷ್ಟೇ ಅಲ್ಲದೇ ಗೇಟ್ ಸುತ್ತಮುತ್ತಲ ಪ್ರದೇಶದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತ ನಡೆಯುತ್ತಲೇ ಇರುತ್ತದೆ. ಗೇಟ್ ವ್ಯಾಪ್ತಿಯಲ್ಲಿ ರಸ್ತೆ ಕಿರಿದಾಗಿದ್ದು, ಇದು ವಾಹನ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.
ಇದನ್ನು ಅಭಿವೃದ್ಧಿಪಡಿಸುವ ಕಾರ್ಯ ಲೋಕೋಪಯೋಗಿ ಇಲಾಖೆ ಕೆಲಸ. ರೇಲ್ವೇ ಇಲಾಖೆಗೆ ಸಂಬಂಧಿಸುವುದಿಲ್ಲ ಎಂದು ರೇಲ್ವೆ ಎಂಜಿನಿಯರ್ಗಳು ಹೇಳಿದರೆ, ಈ ರಸ್ತೆಯಲ್ಲಿ ರೇಲ್ವೆ ಹಳಿ ಹಾದು ಹೋಗಿದೆ ಆದರಿಂದ ಈ ಕೆಲಸ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉತ್ತರಿಸುತ್ತಾರೆ.
ಇಚ್ಛಾಶಕ್ತಿ ಕೊರತೆ: ಹೊನ್ನಾಳಿ ರಸ್ತೆ ರೇಲ್ವೆ ಕ್ರಾಸಿಂಗ್ ಸಮಸ್ಯೆ ಪರಿಹಾರಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖುದ್ದು ಆಸಕ್ತಿ ವಹಿಸಿದ್ದರು. ಲೋಕೋಪಯೋಗಿ ಇಲಾಖೆ ಹಾಗೂ ರೇಲ್ವೆ ಇಲಾಖೆಯ ಸಹಭಾಗಿತ್ವದಲ್ಲಿ ಇದೀಗ ಮೇಲು ಸೇತುವೆಯೂ ನಿರ್ಮಾಣವಾಗಿ ಜನರ ಸಮಸ್ಯೆ ಕರಗಿತು.
ಆದರೆ, ಹೊಳೆಹೊನ್ನೂರು ರಸ್ತೆ ಹಾಗೂ ಸವಳಂಗ ರಸ್ತೆ ರೇಲ್ವೆ ಕ್ರಾಸಿಂಗ್ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು ಆಸಕ್ತಿ ತೋರಲೇ ಇಲ್ಲ.
ಇದೀಗ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಶಿವಮೊಗ್ಗಕ್ಕೆ ಬರುತ್ತಿದ್ದಾರೆ, ಈಗಲಾದರೂ ಸಮಸ್ಯೆಗೆ ಪರಿಹಾರ ಸಿಕ್ಕೀತೆ ಎಂಬುದು ಸಮಸ್ಯೆ ಎದುರಿಸುವ ನಾಗರಿಕರ ಪ್ರಶ್ನೆ.
ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ರೈಲ್ವೆ ಸಚಿವರಾದ ನಂತರ ಇದೇ ಮೊದಲ ಬಾರಿ ನಗರಕ್ಕೆ ಆಗಮಿಸುತ್ತಿದ್ದು, ಆ.3ರಂದು 2.30ಕ್ಕೆ ನೈಋತ್ಯ ರೈಲ್ವೆ ಘಟಕವು ನೂತನವಾಗಿ ಆರಂಭಿಸಲಿರುವ ತಾಳಗುಪ್ಪ-ಶಿವಮೊಗ್ಗ- ತಾಳಗುಪ್ಪ (ಪ್ಯಾಸೆಂಜರ್) ರೈಲು ಮಾರ್ಗ ಹಾಗೂ ಮೈಸೂರು-ಶಿವಮೊಗ್ಗ- ಮೈಸೂರು (ಪ್ಯಾಸೆಂಜರ್) ರೈಲು ಸಂಚಾರಕ್ಕೆ ಚಾಲನೆ ನೀಡುವರು.
ರೈಲು ನಿಲ್ದಾಣದ ಬಳಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಉಪಸ್ಥಿತರಿರುವರು.
ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು.