ಹೆಕ್ಟೇರಿಗೆ 4500 ಪರಿಹಾರ: ಕಾಗೋಡು
ಕ.ಪ್ರ.ವಾರ್ತೆ ಟಿ ಸಾಗರ ಟಿ ಆ.2
ತಾಲೂಕಿನಲ್ಲಿ ನೆರೆಯಿಂದ ಹಾನಿಗೊಳಗಾದ ಕೃಷಿಭೂಮಿಗೆ ಕೇಂದ್ರ ಸರ್ಕಾರದ ಹೊಸ ಸೂಚನೆಯಂತೆ ಹೆಕ್ಟೇರಿಗೆ 4500 ಪರಿಹಾರವನ್ನು ತಕ್ಷಣ ವಿತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ, ಹಿಂದೆ ನೆರೆಯಿಂದ ಹಾನಿಗೊಳಗಾದ ಮಳೆತರಿ ಪ್ರದೇಶಗಳಿಗೆ ಎಕರೆಗೆ 800 ಪರಿಹಾರ ನೀಡಲಾಗುತ್ತಿತ್ತು. ಅದನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು ಹೊಸ ಸೂಚನೆಯನ್ನು ಕಳಿಸಿದೆ. ಇದರನ್ವಯ ಹೆಕ್ಟೇರಿಗೆ 4500 ಪರಿಹಾರವನ್ನು ನೀಡಲಾಗುತ್ತದೆ ಎಂದರು.
ವೈಯಕ್ತಿಕ ಪರಿಹಾರಕ್ಕೆ ಕ್ರಮ: ಕಳೆದ 10-15 ವರ್ಷಗಳಿಂದ ಇಷ್ಟೊಂದು ಮಳೆ ಆಗಿರಲಿಲ್ಲ. ದಾಖಲೆ ಪ್ರಮಾಣದ ಮಳೆಯಾಗಿದ್ದರಿಂದ ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ. ಈಗಾಗಲೆ ಅಧಿಕಾರಿಗಳಿಗೆ ನಷ್ಟದ ಅಂದಾಜು ತಯಾರಿಸಲು ಆದೇಶ ನೀಡಲಾಗಿದೆ. ನಷ್ಟವನ್ನು ಭರಿಸಲು ಹಾಗೂ ಪರಿಹಾರ ನೀಡಲು ಅಗತ್ಯವಾದ ಹಣವನ್ನು ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ತಾಲೂಕಿನಲ್ಲಿ ರಸ್ತೆಹಾನಿ, ಜಮೀನು ಜಲಾವೃತ, ಅಡಕೆ ತೋಟಗಳಿಗೆ ನೀರು ನುಗ್ಗಿರುವುದು, ಕಾಲುಸಂಕಗಳು ಕೊಚ್ಚಿಕೊಂಡು ಹೋಗಿರುವುದು, ಮನೆ ಬಿದ್ದಿರುವ ಸಾಕಷ್ಟು ಘಟನೆಗಳು ನಡೆದಿದೆ. ಮನೆ ಬಿದ್ದವರಿಗೆ ವೈಯಕ್ತಿಕ ನಷ್ಟ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕಿನ ಬಹುತೇಕ ಅಡಕೆ ತೋಟಗಳಲ್ಲಿ ಕೊಳೆರೋಗ ಬಂದು ಅಡಕೆ ಉದುರಲಾರಂಭಿಸಿದೆ. ಈ ಬಗ್ಗೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಕೊಳೆರೋಗ ಪೀಡಿತ ತೋಟಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಅಂದಾಜು ತಯಾರಿಸಲಿದ್ದಾರೆ. ರಾಜ್ಯ ಸರ್ಕಾರ ಹಾನಿಗೊಳಗಾದವರಿಗೆ ಪರಿಹಾರವನ್ನು ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದರು.
ಅಡಕೆ ಪುನಶ್ಚೇತನ ಯೋಜನೆಯಡಿ ಅಡಕೆ ತೋಟಗಳಲ್ಲಿ ಹಿಡಿಮುಂಡುಗೆ ರೋಗ, ಹಳದಿಎಲೆ ರೋಗ ಹಾಗೂ ಬೇರುಹುಳು ರೋಗ ಬಂದಿದ್ದರೆ ಅಂತಹ ತೋಟಗಳಿಗೆ ಎಕರೆಗೆ ಮೂರು ಸಾವಿರ ಪರಿಹಾರಧನ ನೀಡಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಈಗಾಗಲೆ ಅರ್ಜಿ ಸಲ್ಲಿಸುವ ಅವಧಿ ಜು. 29ಕ್ಕೆ ಮುಗಿದಿದೆ. ಯೋಜನೆ ಕುರಿತು ಬೆಳೆಗಾರರಿಗೆ ಯಾವುದೆ ಮಾಹಿತಿ ಇಲ್ಲ. ಬೆಳೆಗಾರರಿಗೆ ಮಾಹಿತಿ ನೀಡದೆ ಹೋದರೆ ಯಾವುದೆ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಆದ್ದರಿಂದ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.
ತಾಳಗುಪ್ಪ ಹೋಬಳಿಯಲ್ಲಿ ವರದಾನದಿ ಪ್ರವಾಹದಿಂದ ಸಾಕಷ್ಟು ಹಾನಿ ಉಂಟಾಗಿದ್ದು, ಸಾವಿರಾರು ಎಕರೆ ಜಮೀನು ಜಲಾವೃತವಾಗಿದೆ. ರೈತರು ಆತಂಕದಲ್ಲಿದ್ದು ಅವರಿಗೆ ಪರಿಹಾರ ಕಲ್ಪಿಸುವ ಕುರಿತು ತುರ್ತು ಗಮನ ಹರಿಸಲಾಗುವುದು. ಪ್ರತಿವರ್ಷ ಪ್ರವಾಹದಿಂದ ಜನರು ದ್ವೀಪದಲ್ಲಿನ ಜೀವನ ನಡೆಸುವಂತಾಗಿದೆ. ಬೀಸನಗದ್ದೆ ಗ್ರಾಮಕ್ಕೆ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಸುಮಾರು 25 ಲಕ್ಷ ವೆಚ್ಚವಾಗುತ್ತದೆ. ಈ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಹೇಳಿದರು.
ಕೆ. ಹೊಳೆಯಪ್ಪ, ಎನ್.ಜಿ. ಪೈ, ತೀ.ನ. ಶ್ರೀನಿವಾಸ್, ಎನ್. ಶ್ರೀನಾಥ್, ಪೌರಾಯುಕ್ತ ನರಸಿಂಹಮೂರ್ತಿ, ಕೆ.ಎಚ್. ನಾಗಪ್ಪ, ರಾಮಪ್ಪ, ವಿಠ್ಠಲ ಹೆಗಡೆ, ಎಸ್.ಬಿ. ರಘುನಾಥ್ ಹಾಜರಿದ್ದರು.