ಅಪಾಯದಂಚಲ್ಲಿ ವಿದ್ಯುತ್ ಕಂಬ
ಜೋಗ್ ಫಾಲ್ಸ್: ಸಮೀಪದ ಇಡುವಾಣಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಗುಡ್ಡವೊಂದು ಕುಸಿದಿದ್ದು, ಸಮೀಪದಲ್ಲೇ ಇರುವ ಹೈ ಟೆನ್ಷನ್ ವಿದ್ಯುತ್ ಕಂಬಗಳು ಅಪಾಯದ ಅಂಚಿನಲ್ಲಿವೆ.
ಜೋಗದಿಂದ ಬೆಂಗಳೂರಿಗೆ ಸಾಗುವ ಆರು ಮಾರ್ಗಗಳಲ್ಲಿ ಬೃಹತ್ವಿದ್ಯುತ್ಕಂಬಗಳು ಹಾದು ಹೋಗಿದ್ದು, ಈಗ ಕುಸಿದಿರುವ ಗುಡ್ಡದ ನೆತ್ತಿಯ ಮೇಲೆ ಈ ಹೈ ಟೆನ್ಷನ್ ವಿದ್ಯುತ್ ಕಂಬಗಳು ಇರುವುದರಿಂದ ಆತಂಕದಲ್ಲಿ ಗ್ರಾಮಸ್ಥರು ಕಾಲ ಕಳೆಯುವಂತಾಗಿದೆ. ಕೆಪಿಟಿಸಿಎಲ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.