ಅವ್ಯವಸ್ಥೆಯ ಆಗರವಾದ ಅಥ್ಲೆಟಿಕ್ ಕ್ರೀಡಾಕೂಟ ಕಾರ್ಯಕ್ರಮ
ಶಿವಮೊಗ್ಗ: ಪೂರ್ವ ನಿಯೋಜಿತ ವ್ಯವಸ್ಥೆ ಇಲ್ಲದೇ ಇದ್ದರೆ ಕಾರ್ಯಕ್ರಮ ಎಷ್ಟು ಹದಗೆಟ್ಟು ಹೋಗುತ್ತದೆ, ಶಿವಮೊಗ್ಗದ ಮಾನ ಮೂರಾಬಟ್ಟೆಯಾಗುತ್ತದೆ ಎಂಬುದಕ್ಕೆ ಶನಿವಾರ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮ ಸಾಕ್ಷಿಯಾಯಿತು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪದೇಪದೇ ಎಡವಟ್ಟು ಮಾಡಿಕೊಳ್ಳುತ್ತಲೇ ಇದೆ. ಈ ಹಿಂದೆ ನಡೆದ ಯುವಜನ ಮೇಳದಲ್ಲಾದ ತಪ್ಪುಗಳನ್ನು ತಿದ್ದಿಕೊಳ್ಳದೇ ತಾನು ಮಾಡುತ್ತಿರುವುದೇ ಸರಿ ಎಂಬಂತೆ ವರ್ತಿಸುತ್ತಿದೆ.ಶನಿವಾರ ಆಗಿದ್ದಿಷ್ಟು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಟ್ಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಹಾಗೂ ರಾಜ್ಯ ಮಟ್ಟದ 25ನೇ ಜ್ಯೂನಿಯರ್ ಅಥ್ಲೆಟಿಕ್ ಕ್ರೀಡಾಕೂಟ ಆಯೋಜನೆಗೊಂಡಿತ್ತು. ಕಾರ್ಯಕ್ರಮದ ರಾಯಭಾರಿಯಾಗಿ ಚಿತ್ರನಟ ಸುದೀಪ್ ಆಗಮಿಸಿದ್ದರು. ಕಾರ್ಯಕ್ರಮದ ಬಗ್ಗೆ ಸೂಕ್ತ ಮುಂದಾಲೋಚನೆ ಮಾಡದ ಪರಿಣಾಮ ನೂಕುನುಗ್ಗಲು, ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳ ತಳ್ಳಾಟ, ಹೊರ ಜಿಲ್ಲೆಗಳಿಂದ ಬಂದಿದ್ದ ಕ್ರೀಡಾಪಟುಗಳ ನುಗ್ಗಾಟ ನಡೆಯಿತು. ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಕಿಚ್ಚ... ಕಿಚ್ಚ ಎಂದು ಬೊಬ್ಬೆಯಿಡಲಾರಂಭಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಸಚಿವರು ಒಂದೇ ವಾಕ್ಯದಲ್ಲಿ ತಮ್ಮ ಭಾಷಣ ಆರಂಭಿಸಿ, ನಿಮ್ಮ ಕಿಚ್ಚನೊಂದಿಗೆ ಮಾತನಾಡಿ ನಾವುಗಳು ಹೆಚ್ಚು ಹೊತ್ತು ಮಾತನಾಡುವುದಿಲ್ಲ ಎಂದು ತಮ್ಮ ಭಾಷಣ ಮುಗಿಸಿದರು. ಪೊಲೀಸರ ಅಸಹಾಯಕತೆ: ಸಚಿವರು ವೇದಿಕೆಯಿಂದ ಹೊರನಡೆಯುತ್ತಿದ್ದಂತೆ ಯುವಕ- ಯುವತಿಯರ ದಂಡು ವೇದಿಕೆಯತ್ತ ನುಗ್ಗತೊಡಗಿತು. ಪರಿಸ್ಥಿತಿ ನಿಯಂತ್ರಿಸಲಾಗಿದೆ ಪೊಲೀಸರು, ಇಲಾಖೆ ಅಧಿಕಾರಿಗಳು ಅಸಹಾಯಕತೆ ತೋರಿದರು. ಈ ನಡುವೆ ಇಲಾಖೆಯ ಕೆಲ ಅಧಿಕಾರಿಗಳು ತಮ್ಮ ಮಕ್ಕಳನ್ನು ಸುದೀಪ್ ಅವರಿಗೆ ಪರಿಚಯ ಮಾಡಿಕೊಳ್ಳುತ್ತಿದ್ದರೆ, ಇತ್ತ ತಮ್ಮ ನೆಚ್ಚಿನ ನಟನನ್ನು ನೋಡಲು ವೇದಿಕೆ ಮುಂಭಾಗಕ್ಕೆ ಬಂದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಸಂದರ್ಭದಲ್ಲಿ ಗಾಬರಿಗೊಂಡು ಓಡಿದ ವಿದ್ಯಾರ್ಧಿಗಳು ಸಿಂಥೆಟಿಕ್ ಟ್ಕ್ಯಾಕ್ ಮೇಲೆ ಕುಳಿತಿದ್ದ ಕ್ರೀಡಾಪಟುಗಳ ಮೇಲೆ ಓಡತೊಡಗಿದರು. ಕೆಲ ಕ್ರೀಡಾಪಟುಗಳು ಬಿದ್ದು ಗಾಯಗೊಂಡ ಪ್ರಸಂಗವೂ ನಡೆಯಿತು.ಕ್ರೀಡಾಂಗಣಕ್ಕೆ ನುಗ್ಗಿದರು: ವೇದಿಕೆ ಪಕ್ಕದಲ್ಲಿ ಸಾರ್ವಜನಿಕರಿಗಾಗಿ ವ್ಯವಸ್ಥೆ ಮಾಡಿದ್ದ ಸ್ಥಳದಿಂದ ಜನರು ವೇದಿಕೆ ನುಗ್ಗಿದರು. ಇದರಿಂದ ನೂಕು ನುಗ್ಗಲು ಉಂಟಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದ ಅತಿಥಿಗಳ, ಗಣ್ಯರ ಮೇಲೆ ಕೆಲವರು ಬಿದ್ದರು. ಪೊಲೀಸರು ಎಷ್ಟೆ ಪ್ರಯತ್ನಿಸಿದರೂ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕೆಲ ಪತ್ರಕರ್ತರಿಗೂ ಸಣ್ಣ-ಪುಟ್ಟ ಗಾಯಗಳಾದವು. ಮತ್ತೊಂದೆಡೆ ಕ್ರೀಡಾಂಗಣದ ಬ್ಯಾರಿಕೇಡ್ ಮುರಿದು ಕ್ರೀಡಾಂಗಣದೊಳಗೆ ಜನರು ನುಗ್ಗಿದರು. ಇದರಿಂದ ಕ್ರೀಡಾಪಟುಗಳು ಆತಂಕ್ಕೆ ಒಳಗಾದರು. ಈ ಬಗ್ಗೆ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಿದರೆ, ಸುದೀಪ್ ಅವರು ಅಥ್ಲೆಟಿಕ್ ಕ್ರೀಡಾಕೂಟದ ರಾಯಬಾರಿ. ಹಾಗಾಗಿ ಅವರನ್ನು ಅಥ್ಲೆಟಿಕ್ ಅಸೋಸಿಯೇಷನ್ ಕಡೆಯಿಂದ ಆಹ್ವಾನಿಸಲಾಗಿದೆ. ಕ್ರೀಡಾ ಇಲಾಖೆಯಿಂದ ಆಹ್ವಾನ ಮಾಡಿಲ್ಲ ಎಂದು ಕಾರ್ಯಕ್ರಮದಲ್ಲಾದ ಅವ್ಯವಸ್ಥೆಯಲ್ಲಿ ತಮ್ಮದೇನು ಹೊಣೆಗಾರಿಕೆ ಇಲ್ಲ ಎಂಬಂತೆ ಸಮಜಾಯಿಷಿ ನೀಡಿದರು.