ಚರಂಡಿ ನೀರು ಬಾವಿಗೆ
ಸೊರಬ: ತಾಲೂಕು ಕಡಸೂರು ಗ್ರಾಮದ ಕುಮಟ- ಕಡಮಡಗಿ ರಾಜ್ಯ ಹೆದ್ದಾರಿ ಕಾಲುವೆ ಅಸಮರ್ಪಕವಾಗಿರುವುದರಿಂದ ರಸ್ತೆ ಪಕ್ಕದ ಕೆಲವು ಮನೆಗಳ ಬಾವಿ ನೀರು ಹಾಳಾಗಿದೆ.
ರಸ್ತೆಯ ಹಾಗೂ ಅಲ್ಲೆ ಇರುವ ಮನೆಗಳ ಗೊಬ್ಬರ ಇತ್ಯಾದಿ ತ್ಯಾಜ್ಯಗಳ ಮೇಲೆ ಹರಿದು ಬಂದ ನೀರು ಚರಂಡಿಯಿಲ್ಲದೆ ತಗ್ಗು ಪ್ರದೇಶದಲ್ಲಿರುವ ಕುಡಿಯುವ ನೀರಿನ ಬಾವಿಗೆ ಸೇರುತ್ತಿದ್ದು, ಬಾವಿಯ ನೀರು ಕುಡಿಯಲು ಅನುಪಯುಕ್ತವಾಗಿದೆ. ಒಂದೆಡೆ ಮಳೆ, ವಿದ್ಯುತ್ ಸಂಪರ್ಕ ಅಸ್ತವ್ಯಸ್ತ, ಈ ನಡುವೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ.
ಇಲ್ಲಿನ ನಿವಾಸಿ ಪಟೇಲ್ ಚಂದ್ರಶೇಖರಪ್ಪ ಗೌಡರ ಮನೆಯವರು, ಗ್ರಾಪಂ ಗಮನಕ್ಕೆ ತಂದರೆ ನಮಗೆ ಸಂಬಂಧಿಸಿದ್ದಲ್ಲ ಎನ್ನುತ್ತಾರೆ. ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದರೆ ನೀವೆ ಸುಧಾರಿಸಿಕೊಂಡು ಸರಿಪಡಿಸಿಕೊಳ್ಳಿ, ಈಗ ಮಳೆ ಅಧಿಕವಾಗಿರುವುದರಿಂದ ಏನೂ ಮಾಡಲಾಗುತ್ತಿಲ್ಲ ಎಂದು ಕೈ ಚೆಲ್ಲಿದ್ದಾರೆ.
ಹಾಗಾದರೆ ಅಲ್ಲಿಯವರೆಗೆ ನಾವು ನೀರು ಕುಡಿಯುವುದು ಹೇಗೆ ಎಂಬುದು ಅರ್ಥವಾಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದೇ ಪರಿಸ್ಥಿತಿ ಪ್ರಮುಖ ರಸ್ತೆಗಳ ಬದಿಯಲ್ಲಿರುವ ಅನೇಕ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು, ಎಲ್ಲೂ ರಸ್ತೆಗಳಿಗೆ ಸಮರ್ಪಕ ಕಾಲುವೆ ಇಲ್ಲದಂತಾಗಿದೆ. ಈಗಾಗಲೇ ಇದೇ ಸೊರಬ ಕುಮಟ ರಸ್ತೆಯ ಕೋಣನ ಮನೆ ಗ್ರಾಮದ ಬಳಿ ಅನೇಕ ವಾಹನಗಳು ಅಪಘಾತಕ್ಕೀಡಾಗಿವೆ. ಹಾಗಾಗಿ ವಾಹನಗಳನ್ನು ಟಾರ್ ರಸ್ತೆ ಬಿಟ್ಟು ಅಂಚಿಗೆ ಇಳಿಸಲು ಯೋಚಿಸುವಂತಾಗಿದೆ. ಚರಂಡಿ ಅಸಮರ್ಪಕತೆಯಿಂದಾಗಿ ಲಕ್ಷಾಂತರ ರು. ವ್ಯಯಿಸಿ ನಿರ್ಮಿಸಿದ ರಸ್ತೆಗಳು ಶಿಥಿಲಗೊಂಡಿವೆ. ಸಂಚಾರಕ್ಕೆ ಅಡಚಣೆ ಉಂಟಾಗಿದೆ.