'ಪ್ಲಾಸ್ಟಿಕ್ ಧ್ವಜ ಮಾರಾಟಗಾರರ ವಿರುದ್ಧ ಕ್ರಮ'
ಸಾಗರ: ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡಿದವರ ವಿರುದ್ಧ ಕಾನೂನುಕ್ರಮ ಜರುಗಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಸ್ವಾತಂತ್ರ್ಯೋತ್ಸವ ಆಚರಣೆ ಅಂಗವಾಗಿ ನಗರಸಭೆ ಆವರಣದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ, ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಆಡಳಿತದೊಂದಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದರು.
ಹಿರಿಯರ ತ್ಯಾಗಬಲಿದಾನದಿಂದ ದೊರಕಿರುವ ಸ್ವಾತಂತ್ರ್ಯವನ್ನು ನಾವು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಇಂತಹ ರಾಷ್ಟ್ರೀಯ ಹಬ್ಬಗಳನ್ನು ಹೆಚ್ಚು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿಯೇ ಸ್ವಾತಂತ್ರ್ಯ ಪಡೆದಿದ್ದ ಅನೇಕ ರಾಷ್ಟ್ರಗಳು ಇಂದು ಛಿದ್ರವಾಗಿ ಹೋಗಿದೆ. ಆದರೆ ಅನೇಕತೆಯಲ್ಲಿ ಏಕತೆಯನ್ನು ಅಳವಡಿಸಿಕೊಂಡಿದ್ದರ ಪರಿಣಾಮವಾಗಿ ಭಾರತ ಏಕ ರಾಷ್ಟ್ರವಾಗಿ ಉಳಿದುಕೊಂಡಿದೆ ಎಂದು ಹೇಳಿದರು. ತಹಸೀಲ್ದಾರ್ ಆರ್. ರಾಜಣ್ಣ, ಪೌರಾಯುಕ್ತ ನರಸಿಂಹಮೂರ್ತಿ, ನಗರಸಭೆ ಅಧಿಕಾರಿಗಳಾದ ಭೂಮೇಶ್, ಗುರುಪ್ರಸಾದ್ ಹಾಜರಿದ್ದರು.