ಬದಲಾವಣೆ ಗ್ರಾಮ ಮಟ್ಟದಿಂದಾಗಬೇಕು: ಕಾಗೋಡು
ಶಿವಮೊಗ್ಗ, ಬೆಳವಣಿಗೆ ಹಾಗೂ ಬದಲಾವಣೆಗಳು ಗ್ರಾಮ ಮಟ್ಟದಿಂದಾಗಬೇಕು. ಕೇರಿಗಳು ಒಂದಾಗಬೇಕು, ಒಟ್ಟಿಗೆ ಒಂದೇ ರೀತಿ ಜೀವನ ನಡೆಸಿದರೆ ಸರ್ವಜನಾಂಗದ ಶಾಂತಿಯ ತೋಟದಂತಾಗುತ್ತದೆ. ಇದೀಗ ಬದಲಾವಣೆಯ ಕಾಲಬಂದಿದ್ದು, ಯುವಶಕ್ತಿ ಮೈಕೊಡವಿ ಬದಲಾವಣೆಗೆ ಒಡ್ಡಿಕೊಳ್ಳಬೇಕು ಎಂದು ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಸಲಹೆ ನೀಡಿದರು.
2011-12ನೇ ಸಾಲಿನ ರಾಜ್ಯ ಮಟ್ಟದ ಯುವ ಸಮ್ಮೇಳನ, ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮದ ಉದ್ಘಾಟನೆ ನಂತರ ಮಾತನಾಡಿದ ಅವರು, ಯುವ ಜನಾಂಗ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು, ಈ ವರ್ಗ ಮನಸ್ಸು ಮಾಡಿದರೆ ಸಮಾಜದ ಬದಲಾವಣೆ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಬಲಿಷ್ಠ ರಾಜ್ಯ: ರಾಜ್ಯದ 6 ಕೋಟಿ ಜನಸಂಖ್ಯೆಯಲ್ಲಿ 1.85 ಲಕ್ಷ ಮಂದಿ 16ರಿಂದ 30 ವಯೋವಾನದವರಿದ್ದಾರೆ. ಮುಂದಿನ ಆಗುಹೋಗುಗಳಿಗೆ ಈ ವಯೋವಾನದವರೇ ನಿರ್ಧಾರಕರು. ರಾಜ್ಯದ ವಿಜ್ಞಾನ, ಕ್ರೀಡೆ, ವೈದ್ಯಕೀಯ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬಲಿಷ್ಠ ನಾಡು ಕಟ್ಟುವ ಜವಾಬ್ದಾರಿ ಈ ಯುವಜನಾಂಗದ ಮೇಲಿದೆ ಎಂದು ಕ್ರೀಡಾ ಸಚಿವ ಅಭಯ ಚಂದ್ರ ಹೇಳಿದರು.
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ನಮ್ಮ ಬದುಕು ಕಟ್ಟಿಕೊಡಲು ಯಾರೂ ಬರುವುದಿಲ್ಲ. ನಮ್ಮಲ್ಲಿರುವ ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಳ್ಳದೇ ಹೋದರೆ ವೈಯಕ್ತಿಕ ಲಾಭವೂ ಇಲ್ಲ, ಸಮಾಜಕ್ಕೂ ಉಪಯೋಗವಿಲ್ಲ ಎಂದರು.
ಉರಗ ತಜ್ಞ ಕಿರಣ್, ಕೇಶವ, ಪ್ರಭಾಕರ್, ಮಾರುತಿಯವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಶಾಸಕ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯುವ ಸಮ್ಮೇಳನ, ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮ ಆಗಸ್ಟ್ 5ರವರೆಗೂ ನಡೆಯುವುದು.