'ಬೀಸನಗದ್ದೆಗೆ ಪರಿಹಾರ ಅಗತ್ಯ'
ಸಾಗರ: ತಾಲೂಕಿನ ತಡಗಳಲೆ ಗ್ರಾಮದ ಬೀಸನಗದ್ದೆ ಗ್ರಾಮ ಪ್ರತಿವರ್ಷ ವರದಾನದಿಯ ಪ್ರವಾಹದಿಂದ ದ್ವೀಪವಾಗಿ ಹೊರ ಸಂಪರ್ಕ ಕಳೆದುಕೊಳ್ಳುತ್ತದೆ.
ಪ್ರತಿವರ್ಷ ದೋಣಿ ಹಾಕುವುದು, ರಾಜಕಾರಣಿಗಳು, ಅಧಿಕಾರಿಗಳು ಪ್ರದೇಶಕ್ಕೆ ಭೇಟಿ ನೀಡುವುದು ಮಾಮೂಲಿಯಾಗಿದೆ. ಇದಕ್ಕೊಂದು ಶಾಶ್ವತ ಪರಿಹಾರವನ್ನು ಸ್ಥಳೀಯ ಶಾಸಕರಾಗಲೀ, ಅಧಿಕಾರಿಗಳಾಗಲೀ ಯಾರೂ ಈವರೆಗೂ ಮಾಡಿಲ್ಲ ಎಂದು ಜಿಪಂ ಮಾಜಿ ಸದಸ್ಯ ಬಿ.ಆರ್. ಜಯಂತ್ ದೂರಿದ್ದಾರೆ.
ತಡಗಳಲೆಯಿಂದ ಬೀಸನಗದ್ದೆವರೆಗೆ ಸುಮಾರು 1.50 ಕಿ.ಮೀ. ದೂರ 2 ಮೀಟರ್ ಎತ್ತರದ ಮಣ್ಣಿನ ಬ್ಯಾಂಕ್ ನಿರ್ಮಿಸಿ, ಇದರ ಮೇಲೆ ಜಲ್ಲಿ ರಸ್ತೆ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ. ಹಣವನ್ನು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಭರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.