ಸುಟ್ಟಿರುವ ಟಿಸಿ: ಕುಡಿವ ನೀರಿಗೆ ಸಮಸ್ಯೆ
ಸೊರಬ: ಸತತ 20 ದಿನಗಳಿಂದಲೂ ಮಳೆ ಸುರಿಯುತ್ತಿದ್ದರೂ ಪಟ್ಟಣದ ಕೆಲವೆಡೆ ಕುಡಿಯುವ ನೀರಿನ ಬವಣೆ ಎದುರಾಗಿದೆ.
ಇಲ್ಲಿನ 10ನೇ ವಾರ್ಡಿನ ಮಾರ್ಕೆಟ್ ರಸ್ತೆ ಮತ್ತು ಮಸೀದಿ ರಸ್ತೆ ನಿವಾಸಿಗಳಿಗೆ 5 ದಿನದಿಂದ ಕುಡಿಯುವ ನೀರಿಲ್ಲ. ನೀರು ಸರಬರಾಜಿಗೆ ಅಗತ್ಯವಿರುವ ಇಲ್ಲಿನ ವಿದ್ಯುತ್ ಪರಿವರ್ತಕ ಸುಟ್ಟಿರುವುದರಿಂದ ನೀರು ವಿತರಿಸಲು ತೊಂದರೆ ಆಗಿದೆ. ಪಪಂ ಅಧಿಕಾರಿಗಳಿಗೆ ಹಾಗೂ ಮೆಸ್ಕಾಂ ಇಲಾಖೆ ಗಮನಕ್ಕೆ ತಂದಿದ್ದರೂ ಸಹಾ ಮಳೆಯ, ಸಿಬ್ಬಂದಿ ಕೊರತೆಯ ನೆಪವೊಡ್ಡಿ ಪರಿಹಾರ ಕಾರ್ಯಕ್ಕೆ ಮುಂದಾಗಿಲ್ಲ.
ಸದ್ಯ ಟ್ಯಾಂಕರ್ ಮೂಲಕ ನೀರು ಪೂರೈಸಲು ಪಟ್ಟಣ ಆಡಳಿತ ಮುಂದಾಗಿದ್ದು, ನೀರು ಕಲುಷಿತವಾಗಿರುವುದರಿಂದ ನೀರು ಸೇವಿಸಲು ನಿವಾಸಿಗಳು ಹೆದರುವಂತಾಗಿದೆ.
ಚಿಕೂನ್ ಗುನ್ಯಾ, ಡೆಂಘೀ ಮೊದಲಾದ ಸಾಂಕ್ರಮಿಕ ರೋಗ ತಗಲುವ ಮುನ್ನ ಸ್ವಚ್ಛ ನೀರು ನೀಡಿ, ಮೊದಲು ಪರಿವರ್ತಕ ಅಳವಡಿಸಿ ನಲ್ಲಿ ನೀರು ಕೊಡಿ ಎಂದು ಇಲ್ಲಿನ ನಿವಾಸಿಗಳು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.