ಚಿತ್ರರಂಗದಲ್ಲಿ ಒಳ್ಳೇದು ಆಲೋಚಿಸುವ ಮನಸ್ಸು ಬಂದಿಲ್ಲ: ವಿನಯ್ಕುಮಾರ್
ಕ.ಪ್ರ.ವಾರ್ತೆ ,ಶಿವಮೊಗ್ಗ , ಆ.4
ಪ್ರಸ್ತುತ ಚಿತ್ರರಂಗದಲ್ಲಿ ಒಳ್ಳೆಯ ಆಲೋಚನೆ ಮಾಡುವ ಮನಸ್ಸುಗಳು ಬಂದಿಲ್ಲ. ಅದೇ ರೀತಿ ಚಿತ್ರ ನೋಡುವವರ ಮನಸ್ಥಿತಿ ಕೂಡ ಹಾಗೇ ಇದೆ ಎಂದು ಮೀಡಿಯಾ ಹೌಸ್ ಸ್ಟುಡಿಯೋ ಟೂರಿಂಗ್ ಟಾಕೀಸ್ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ. ವಿನಯಕುಮಾರ್ ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಪಂ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಯುವ ಸಮ್ಮೇಳನ, ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಸಮಕಾಲೀನ ಚಲನಚಿತ್ರ ಮಾಧ್ಯಮ, ಯುವಜನರ ಮುಂದಿರುವ ಸಾಧ್ಯತೆ ಹಾಗೂ ಸವಾಲು ವಿಷಯ ಕುರಿತು ಅವರು ಮಾತನಾಡಿದರು.
ಹೆಚ್ಚಿದ ಹೊಡೆದಾಟ: ಇಂದು ಕಮರ್ಷಿಯಲ್ ಸಿನಿಮಾಗಳಲ್ಲಿ ಕೇವಲ ಹೊಡೆದಾಟ, ಬಡಿದಾಟಗಳೇ ಹೆಚ್ಟಾಗಿವೆ ಎಂದ ಅವರು, ಚಿತ್ರರಂಗದಲ್ಲಿ ಚಿತ್ರಕಥೆ ಬರೆಯುವವರ ಸಂಖ್ಯೆ ಕಡಿಮೆ ಇದ್ದು, ಹೊಸ ತರಹದ ಕಥೆ ಬರೆಯುವವರಿಗೆ ಬಹಳ ಬೇಡಿಕೆ ಇದೆ. ಚಿತ್ರರಂಗದಲ್ಲಿ ಒಳ್ಳೆಯ ಕಥೆ ಬರೆಯುವ ಬರಹಗಾರ ಕಡಿಮೆ ಆಗಿದ್ದಾನೆ. ಸರಳವಾದ ಉತ್ತಮ ಕಥೆಯಿಂದ ಹಿಟ್ ಆದಂತಹ ಚಲನಚಿತ್ರಗಳು ಎಣಿಕೆಯಷ್ಟು ಮಾತ್ರ.
ಉದಾಹರಣೆಗೆ ತ್ರಿಈಡಿಯಟ್ಸ್, ಟೈಟಾನಿಕ್, ಕನ್ನಡದ ಮುಂಗಾರುಮಳೆ ಬಹಳ ಸರಳವಾದ ಕಥೆಗಳನ್ನೊಳಗೊಂಡ ಚಲನಚಿತ್ರಗಳು. ಇಂತಹ ಕಥೆಗಳನ್ನು ಬರೆಯುವವರಿಲ್ಲದೇ ಚಿತ್ರರಂಗ ಸೊರಗಿದೆ ಎಂದು ಬೇಸರವ್ಯಕ್ತಪಡಿಸಿದರು.
ಯುವಕರು ಇಂದು ಚಿತ್ರರಂಗದಲ್ಲಿ ನಾಯಕ, ನಿರ್ದೇಶಕನಾಗಬೇಕೆಂದು ಬಯಸುತ್ತಾರೆ. ಆದರೆ ಚಿತ್ರರಂಗದಲ್ಲಿ ಇದಕ್ಕಿಂತ ಒಳ್ಳೆಯ ಸ್ಥಾನಗಳು ರಂಗದಲ್ಲಿ ಲಭ್ಯವಿದೆ ಎಂದ ಅವರು, ಇಂದು ರು. 5,000 ಕ್ಯಾಮೆರಾದಿಂದ 4-5 ಸಾವಿರ ರುಪಾಯಿವರೆಗಿನ ಕ್ಯಾಮೆರಾಗಳಲ್ಲಿ ಚಲನಚಿತ್ರ ನಿರ್ಮಾಣ ಮಾಡಬಹುದು. ಇದನ್ನು ಇಂದಿನ ಯುವ ಜನಾಂಗ ತಿಳಿದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಸಮಯ ವ್ಯರ್ಥ: ದಡ್ರುಪದ ವಿಶ್ವವಿದ್ಯಾನಿಲಯದ ಯುಗಧರ್ಮ ರಾಮಣ್ಣ, ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಆದರೆ, ಇಂದಿನ ಯುವಕರು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ.
ವಿಜ್ಞಾನ ಯುಗದಲ್ಲಿ ಸಿಲುಕಿಕೊಂಡು ಅಜ್ಞಾನಿಗಳಾಗುತ್ತಿದ್ದಾರೆ. ಅಧುನಿಕ ಯುಗಕ್ಕೆ ಮನಸೋತ ಯುವಕರಿಗೆ ಲೋಕಾನುಭವ ಶಿಕ್ಷಣ ನೀಡುವ ಅಗತ್ಯ ಇದೆ ಎಂದರು.
ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ರಾಜಪ್ಪ, ಬೆಂಗಳೂರಿನ ತರಬೇತುದಾರ ಜಿ.ಎಸ್. ಫಣಿ ಭೂಷಣ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಇದ್ದರು.