ನೌಕರರ ಸಂಘದ ಅಧ್ಯಕ್ಷರ ಆಯ್ಕೆ
ಸೊರಬ: ತಾಲೂಕು ನೌಕರರ ಸಂಘದ ಅಧ್ಯಕ್ಷರಾಗಿ ಹೊಳೆಲಿಂಗಪ್ಪ, ಖಜಾಂಚಿಯಾಗಿ ಚಂದ್ರನಾಯ್ಕ್, ರಾಜ್ಯ ಪರಿಷತ್ ಪ್ರತಿನಿಧಿಯಾಗಿ ರವಿಪ್ರಕಾಶ್ ಆಯ್ಕೆಯಾದರು.
ಖಜಾಂಚಿ ಅವಿರೋಧವಾಗಿ ಆಯ್ಕೆಯಾದರೆ, ಅಧ್ಯಕ್ಷ, ರಾಜ್ಯ ಪರಿಷತ್ ಸ್ಥಾನಕ್ಕೆ ಪೈಪೋಟಿ ನಡೆದು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಆಯ್ಕೆಗೊಂಡ ಹೊಳೆಲಿಂಗಪ್ಪ ಆಯ್ಕೆಗೊಳಿಸಿದ ನಿರ್ದೇಶಕರಿಗೆ ಅಭಿನಂದಿಸಿದರು. ಸಾರ್ವಜನಿಕರು, ನೌಕರರೊಡನೆ ಉತ್ತಮ ಸಂಪರ್ಕವಿರಿಸಿಕೊಂಡು ನೌಕರರ ಕುಂದುಕೊರತೆ ಕುರಿತಂತೆ ಸ್ಪಂದಿಸುವುದಾಗಿ ತಿಳಿಸಿದರು. ನಿರ್ದೇಶಕರ ಮಾರ್ಗದರ್ಶನ, ಸಹಕಾರದಿಂದ ನೌಕರರ ಭವನಕ್ಕೆ ನಿವೇಶನ ಹಾಗೂ ಕಟ್ಟಡ ನಿರ್ಮಾಣ ಮೊದಲ ಗುರಿ. ಪ್ರಸಕ್ತ ಜಿಲ್ಲಾ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಘುರಾಮ್ ದೇವಾಡಿಗರನ್ನು ಬೆಂಬಲಿಸುತ್ತೇವೆ ಎಂದರು. ಜಿಲ್ಲಾ ಸಂಘದ ಪಾಲಾಕ್ಷಪ್ಪ, ಹಾಲಪ್ಪ, ನಾಗಭೂಷಣ, ಕಾಂತರಾಜ್, ಸಾಗರ ಸಂಘದ ಮಾ.ಸ. ನಂಜುಂಡಸ್ವಾಮಿ, ಜಿ. ಪರಮೇಶ್ವರ್ ಇದ್ದರು.