ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶತಮಾನ ಕಂಡ ಗ್ರಂಥಾಲಯಕ್ಕೆ ಬೇಕಿದೆ ಕಾಯಕಲ್ಪ

Vishwanath S
Updated On : 5 Aug 2013, 1:00 am

ನರಸಿಂಹರಾಜಪುರ: ಇಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ 100 ವರ್ಷದ ಹಿಂದಿನ ಹಳೆಯ ಕಟ್ಟಡವೇ ಗತಿಯಾಗಿದೆ.
 ನರಸಿಂಹರಾಜಪುರ ಸಾರ್ವಜನಿಕ ಗ್ರಂಥಾಲಯದ ಕಟ್ಟಡಕ್ಕೆ ತನ್ನದೇ ಆದ ಇತಿಹಾಸವಿದೆ. 100 ವರ್ಷಗಳ ಹಿಂದೆ ನರಸಿಂಹರಾಜಪರಕ್ಕೆ ಎಡೇಹಳ್ಳಿ ಎಂಬ ಹೆಸರಿತ್ತು. 1915 ರಲ್ಲಿ ಮೈಸೂರು ಮಹಾರಾಜರಾದ ನರಸಿಂಹರಾಜ ಒಡೆಯರ್ ಅವರು ಮಂಗಳವಾರದಂದು ಎಡೇಹಳ್ಳಿಗೆ ಆಗಮಿಸಿದಾಗ ಮೈಸೂರು ದಸರಾ ಸಮಯದಲ್ಲಿ ನಡೆಯುವ ದರ್ಬಾರ್‌ಗೆ ಕಾಯಂ ಆಹ್ವಾನಿತರಾಗಿದ್ದ ನರಸಿಂಹರಾಜಪುರ ತಾಲೂಕು ಬೋರ್ಡಿನ ಅಧ್ಯಕ್ಷರಾಗಿದ್ದ ಉದ್ಯಮಿ ಹಾಗೂ ಕೃಷಿಕ ಇಂ.ನಿ. ಶಾಂತಪ್ಪ ಶೆಟ್ಟಿ ಎಂಬ ದಾನಿಗಳು ಸ್ಮಾರಕ ಗ್ರಂಥಾಲಯ ನಿರ್ಮಿಸಲು ಮುಖ್ಯ ರಸ್ತೆಯಲ್ಲಿದ್ದ 70 -120 ಅಳತೆಯ ನಿವೇಶನ ಮತ್ತು ಕಟ್ಟಡವನ್ನು ಬೆಳ್ಳಿಯ ಬೀಗದ ಕೈಯನ್ನು ನೀಡುವುದರೊಂದಿಗೆ ಹಸ್ತಾಂತರ ಮಾಡಿದ್ದರು.
 ಅಂದಿನಿಂದ ಎಡೇಹಳ್ಳಿಗೆ ನರಸಿಂಹರಾಜಪುರ ಎಂಬ ಹೆಸರು ಬಂದಿದೆ ಎಂದು ಗ್ರಂಥಾಲಯದ ಕಟ್ಟಡ ದಾನ ಮಾಡಿದ ಇಂ.ನಿ. ಶಾಂತಪ್ಪಶೆಟ್ಟಿ ಅವರ ವಂಶಸ್ಥರಾದ ಎನ್.ಎಂ. ಮರುಳಪ್ಪ ಜ್ಞಾಪಿಸಿಕೊಳ್ಳುತ್ತಾರೆ.
ಕಟ್ಟಡ ಪುರಸಭೆಗೆ: ದಾನಿಗಳಾದ ಇಂ.ನಿ. ಶಾಂತಪ್ಪ ಶೆಟ್ಟಿ ಅವರು ಗ್ರಂಥಾಲಯಕ್ಕೆ ಕಟ್ಟಡ ನೀಡಿದ್ದರೂ ಮುಂದಿನ ದಿನಗಳಲ್ಲಿ ಸರ್ಕಾರ ಅಲ್ಲಿ ಗ್ರಂಥಾಲಯ ಸ್ಥಾಪಿಸದೆ ಪ್ರಥಮವಾಗಿ ಪ್ರೌಢ ಶಾಲೆ ಪ್ರಾರಂಭಿಸಿತು. ನಂತರ ಈ ಕಟ್ಟಡವನ್ನು ಪುರಸಭೆ ಕಟ್ಟಡವಾಗಿ ಪರಿವರ್ತಿಸಿತು. ಪುರಸಭೆಗೆ ನೂತನ ಕಟ್ಟಡ ನಿರ್ಮಾಣ ಆದ ನಂತರ ಈ ಕಟ್ಟಡ ಪುರಸಭೆಯ ಗೋಡನ್ ಆಯಿತು. 3 ತಲೆ ಮಾರು ಕಳೆದ ನಂತರ ಇಂ.ನಿ. ಶಾಂತಪ್ಪ ಶೆಟ್ಟಿ ಅವರ ವಂಶಸ್ಥರಾದ ಎನ್.ಎಂ. ಮರುಳಪ್ಪ ಅವರು ತಮ್ಮ ಕುಟಂಬದವರು ಗ್ರಂಥಾಲಯಕ್ಕೆ ಎಂದು ನೀಡಿದ ಕಟ್ಟಡವನ್ನು ಪುರಸಭೆಯವರು ಉಪಯೋಗಿಸುತ್ತಿರುವುದನ್ನು ಗಮನಿಸಿ  ಹೋರಾಟ ಪ್ರಾರಂಭಿಸಿದರು.
 ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು. ದಾನ ನೀಡಿದ ದಾಖಲೆಗಳನ್ನು ನೀಡಿ ಆ ಕಟ್ಟಡವನ್ನು ಮತ್ತೆ ಗ್ರಂಥಾಯಲಯಕ್ಕೆ ವರ್ಗಾಯಿಸುವಲ್ಲಿ ಯಶಸ್ವಿಯಾದರು. ನ್ಯಾಯಲಯದ ಪಕ್ಕದಲ್ಲಿದ್ದ ಸಾರ್ವಜನಿಕ ಗ್ರಂಥಾಲಯ ಕಳೆದ 8 ವರ್ಷಗಳ ಹಿಂದೆ ಮತ್ತೆ ಮುಖ್ಯ ರಸ್ತೆಯ ತನ್ನ ಸ್ವಂತ ಕಟ್ಟಡಕ್ಕೆ ಬಂದಿದ್ದು ಸಾರ್ವಜನಿಕರಿಗೆ ಗಂಥಗಳನ್ನು ಓದಲು ಅನುಕೂಲವಾಯಿತು.
ದುರಸ್ತಿಯಾಗದ ಕಟ್ಟಡ: ಆದರೆ, 100 ವರ್ಷಕ್ಕೂ ಹಿಂದಿನ ಈ ಕಟ್ಟಡ ಈಗ ಜೀರ್ಣಾವಸ್ಥೆಗೆ ತಲುಪಿದೆ. ಕಟ್ಟಡದ ಮೇಲ್ಛಾಚಾವಣಿ ಪೂರ್ತಿ ಹಾಳಾಗಿದೆ. ಮಳೆಗಾಲ ಬಂದರೆ ಕಟ್ಟಡದಲ್ಲಿ ಮಳೆಯ ನೀರು ಸೋರುತ್ತಿದೆ. 16 ರಿಂದ 18 ಸಾವಿರ ಗ್ರಂಥಗಳಿದ್ದು ಎಲ್ಲ ಪುಸ್ತಗಳನ್ನು ಜೋಡಿಸಲು ಸುಸುಜ್ಜಿತ ಕಪಾಟು ಇಲ್ಲ. ರಸ್ತೆಯ ಪಕ್ಕದಲ್ಲಿರುವುದರಿಂದ ಕಿಟಕಿಗೆ ಕನ್ನಡಿ ಗ್ಲಾಸ್ ಇಲ್ಲದೆ ಬೇಸಿಗೆಯ ದಿನಗಳಲ್ಲಿ ದೂಳು ಒಳಗೆ ಬರುತ್ತಿದೆ. ಇನ್ನೂ ದುರಂತವೆಂದರೆ ಕಟ್ಟಡದ ಪಕ್ಕದಲ್ಲೇ ಕಾಂಪೌಂಡು ಇದ್ದು ಕಾಂಪೌಂಡು ಸ್ವಲ್ಪ ಭಾಗ ಬಿದ್ದು ಹೋಗಿದೆ. ಕಾಂಪೌಂಡಿನ ಒಳಗಡೆ ಗಿಡ, ಗಂಟೆಗಳು ಬೆಳೆದಿದ್ದು ಈಗ ಆ ಜಾಗ ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಯಾಗಿದೆ. ಸಾರ್ವಜನಿಕರು ಕಾಂಪೌಂಡಿನೊಳಗೆ ನುಗ್ಗಿ ಮೂತ್ರ ಮಾಡುತ್ತಾರೆ. ಇದರಿಂದ ದುರ್ವಾಸನೆ ಬರುತ್ತಿದೆ. ಕಳೆದ 10 ವರ್ಷಗಳ ಹಿಂದೆ ಜಿಲ್ಲಾ ಗ್ರಂಥಾಯಲಯಕ್ಕೆ ಈ ಕಟ್ಟಡ ಹಸ್ತಾಂತರವಾದಾಗ ಗ್ರಂಥಾಯಲಯ ಮೇಲ್ವೀಚಾರಕರು ಕಟ್ಟಡದ ದುರಸ್ತಿಗೆ ಪ್ಲಾನ್ ತಯಾರಿಸಿ 2 ಲಕ್ಷ 30 ಸಾವಿರ ರುಪಾಯಿ ಎಸ್ಟಿಮೇಟ್ ತಯಾರಿಸಿದ್ದರು. ಆದರೆ, ಈವರೆಗೂ ಹಣ ಮಂಜೂರು ಆಗಿಲ್ಲ. ಕಟ್ಟಡದ ದುರಸ್ತಿ ಕಾರ್ಯವೂ ನಡೆದಿಲ್ಲ.
ನೂತನ ಕಟ್ಟಡ ಆಗಬೇಕಿದೆ: ಈ ಕಟ್ಟಡ ನೂರಾರು ವರ್ಷಗಳ ಹಿಂದಿನ ಕಟ್ಟಡವಾಗಿದ್ದು ತಳಪಾಯ ಗಟ್ಟಿಯಾಗಿರುವುದಿಲ್ಲ. ಇದನ್ನು ದುರಸ್ತಿ ಮಾಡಿಸುವುದಕ್ಕಿಂತ ದಾನಿಗಳು ನೀಡಿದ ಕಟ್ಟಡದ ಸ್ಮರಣಾರ್ಥ ಸುಸುಜ್ಜಿತವಾದ ಗ್ರಂಥಾಲಯದ ಕಟ್ಟಡ ನಿರ್ಮಾಣವೇ ಸೂಕ್ತವಾಗುತ್ತದೆ. ಗ್ರಂಥಾಲಯದ ಜೊತೆಗೆ ಕಂಪ್ಯೂಟರ್ ಸೆಂಟರ್ ಮಾಡಿದರೆ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದು ಸಾರ್ವಜಿನಕರ ಅಭಿಪ್ರಾಯವಾಗಿದೆ

-ಯಡಗೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement