ಸಹಾಯ ಹಸ್ತ ನೀಡಿ: ವೇದ ವೇದ್ಯಾನಂದ ಶ್ರೀ
ಕ.ಪ್ರ.ವಾರ್ತೆ ಸೊರಬ ಆ.2
ವಸ್ತುಗಳನ್ನು ನೀಡಿದರೆ ಅದು ಕಳೆದು ಹೋಗಬಹುದು, ಆದರೆ, ಸಹಾಯ ಹಸ್ತದ ಸ್ನೇಹ ನೀಡಿದರೆ ಶಾಶ್ವತ ಉಳಿಯುತ್ತದೆ ಎಂದು ಆನವಟ್ಟಿ ಎಐಎಂ ಚಿತ್ರಾಲಯದ ಸ್ವಾಮಿ ವೇದ ವೈದ್ಯಾನಂದ ಸರಸ್ವತಿಯವರು ತಿಳಿಸಿದರು.
ಇಲ್ಲಿನ ಅಪ್ಪಾಜಿ ಸೇವಾ ಟ್ರಸ್ಟ್, ಸಮಾಜ ಸೇವಾ ಸಂಸ್ಥೆ ಇವರು ಆನವಟ್ಟಿ ಎಐಎಂ ಚಿತ್ರಾಲಯದ ಬಡ ಮಕ್ಕಳಿಗೆ ಉಚಿತವಾಗಿ ನೀಡಿದ ತಟ್ಟೆ, ಲೋಟ ಸ್ವೀಕರಿಸಿ ಮಾತನಾಡಿದರು.
ಸೇವೆಯಂತಹ ಪುಣ್ಯದ ಕಾರ್ಯ ಇನ್ನೊಂದಿಲ್ಲ, ಮನುಷ್ಯ ಮನುಷ್ಯನಿಗಾಗಿ ಸಹಾಯ ಹಸ್ತ ನೀಡುವುದೆ ಮಾನವೀಯ ಆವರಣ ಎನಿಸುತ್ತದೆ. ಈ ನಿಟ್ಟಿನಲ್ಲಿ ಸೇವಾ ಪ್ರಧಾನವಾಗಿರುವ ಇಂತಹ ಟ್ರಸ್ಟ್ ಚಿರಕಾಲ ಬಾಳಿ ಸಾರ್ಥಕ ಬದುಕು ಪಡೆಯುವಂತಾಗಬೇಕು ಎಂದು ಹಾರೈಸಿದರು. ಕಾರ್ಯಕ್ರಮ ಉದ್ಘಾಟಿಸಿದ ಆನವಟ್ಟಿ ಸಪ್ರದಕಾಲೇಜು ಉಪನ್ಯಾಸಕ ತಿಮ್ಮಣ್ಣ ಮಾತನಾಡಿ, ಅಪ್ಪಾಜಿ ಸೇವಾ ಸಂಸ್ಥೆ ಇಂತಹ ಕಿರು ಆಶ್ರಮ, ಶಾಲೆಗಳಿಗೆ ಸಹಾಯ ನೀಡುವ ಮೂಲಕ ಸಾರ್ಥಕತೆ ಕಾಣುತ್ತಿರುವುದು ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ತಾಲೂಕು ಯುವಜನ ಸಂಘದ ಗೌರವಾಧ್ಯಕ್ಷ ಎಂ.ಎಸ್. ಕಾರ್ತೀಕ್, ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿದರು.
ಸಂಸ್ಥೆಯ ಬಿ.ಆರ್. ಸ್ವಾಮಿ ಅಧ್ಯಕ್ಷತೆ ವಹಿಸಿ, ಸಂಸ್ಥೆ ಹಲವು ಏಳು ಬೀಳುಗಳ ನಡುವೆ 5 ವರ್ಷದ ಸೇವೆ ಪೂರೈಸಿದೆ. ಸಂಸ್ಥೆ ಅನವರತವೂ ನೊಂದ, ಬಡವ ಬಲ್ಲಿದರ ಸೇವೆಗಾಗಿ ಮೀಸಲಿರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು. ತತ್ತೂರು ಮಹಾಂತೇಶ್, ಹರೀಶ್, ರಮೇಶ್, ಸನಮ್, ಮೈತ್ರಿ, ಮೀನಾಝ್, ಶಿಲ್ಪ ಹರಳಿಗೆ, ಅನಿಲ್ ಮೊದಲಾದವರು ಇದ್ದರು.