ಪುರಲೆಕೆರೆಗೆ ಬಿದ್ದ ಕಾರು
ಶಿವಮೊಗ್ಗ: ಇತ್ತೀಚೆಗಷ್ಟೆ ಹಾಸನದ ಬೇಲೂರು ರಸ್ತೆಯ ಪಕ್ಕದ ಕೆರೆಗೆ ಬಸ್ಸೊಂದು ಉರುಳಿ ಬಿದ್ದು ಹತ್ತಾರು ಜನ ಸಾವನಪ್ಪಿದ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ನಗರದ ಹೊಳೆಹೊನ್ನೂರು ರಸ್ತೆಯಲ್ಲಿರುವ ಪುರಲೆಕೆರೆಗೆ ಕಾರೊಂದು ಆಯ ತಪ್ಪಿ ಪಕ್ಕದ ಕೆಸರು ಗದ್ದೆಗೆ ಬಿದ್ದ ಘಟನೆ ನಡೆದಿದೆ. ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕ್ರೇನ್ ಮೂಲಕ ಕಾರನ್ನು ಮೇಲೇತ್ತುವ ಕಾರ್ಯ ಕೈಗೊಂಡರು. ಈ ಘಟನೆಯಲ್ಲಿ ಯಾವುದೇ ಸಾವು- ನೋವಿನ ವರದಿ ಆಗಿಲ್ಲ ಎಂದು ತಿಳಿಸಿದ್ದಾರೆ.
ಒಡ್ಡಿನ ರಸ್ತೆಗೆ ಸುರಕ್ಷತೆ ಇಲ್ಲದೆ ಅಪಘಾತಗಳು ಸಂಭವಿಸುತ್ತವೆ. ಕೂಡಲೇ ರಸ್ತೆ ಸುರಕ್ಷತೆ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ಪ್ರಕರಣ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.
ಶಿವಪ್ಪ ನಿಧನ: ಶ್ರದ್ಧಾಂಜಲಿ ಸಭೆ
ಶಿವಮೊಗ್ಗ: ರಾಜ್ಯ ಜೆಡಿಎಸ್ ಮುಖಂಡ, ಹರಿಹರದ ಮಾಜಿ ಶಾಸಕ ಹಾಗೂ ಸಚಿವರಾದ ಎಚ್. ಶಿವಪ್ಪ ಅವರು ಸೋಮವಾರ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಯಿತು.
ನಂತರ ಮಾತನಾಡಿದ ಜೆಡಿಎಸ್ ಅಧ್ಯಕ್ಷ ಎಂ. ಶ್ರೀಕಾಂತ್, ಎಚ್. ಶಿವಪ್ಪನವರ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ. ಶಾಸಕರಾಗಿ, ಸಚಿವರಾಗಿ ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂದ ಅವರು, ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಹಾಗೂ ಕುಟುಂಬ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸಿದರು. ಸಭೆಯಲ್ಲಿ ಜಿ. ಮಾದಪ್ಪ, ಯುವ ಜೆಡಿಎಸ್‌ನ ಅಧ್ಯಕ್ಷ ಜಿ.ಡಿ. ಮಂಜುನಾಥ್, ಎಚ್.ಆರ್. ತ್ಯಾಗರಾಜ್, ನಗರಾಧ್ಯಕ್ಷ ಎಚ್.ವಿ. ಮಹೇಶ್ವರಪ್ಪ, ಕೆ.ಎನ್. ರಾಮಕೃಷ್ಣ, ನಗರಸಭಾ ಸದಸ್ಯ ನಾಗರಾಜ್ ಕಂಕಾರಿ, ಎಚ್. ಪಾಲಾಕ್ಷಿ ಮತ್ತಿತರರು ಇದ್ದರು.